ಬಿಜೆಪಿ ಪ್ರಣಾಳಿಕೆ ಸುಳ್ಳಿನ ಸರಮಾಲೆ. ಅದರಲ್ಲಿ ಒಂದನ್ನೂ ಈಡೇರಿಸಲಿಲ್ಲ. ಅವರಿಗೆ ನುಡಿದಂತೆ ನಡೆಯಲು ಆಗಿಲ್ಲ ಎಂದು ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಳೆದ 15 ವರ್ಷಗಳಿಂದ ಈ ಪಾಲಿಕೆಯಲ್ಲಿ ಬಿಜೆಪಿಯನ್ನೇ ಜನ ಆರಿಸಿದ್ದಾರೆ. ಆದರೆ ನೀವು ಯಾವ ಬದಲಾವಣೆ ತಂದಿದ್ದೀರಿ? ಜನ ನಿಮಗೆ ಯಾಕೆ ಮತ ಹಾಕಬೇಕು? ಬಿಜೆಪಿ ಪ್ರಣಾಳಿಕೆ ಸುಳ್ಳಿನ ಸರಮಾಲೆ. ಅದರಲ್ಲಿ ಒಂದನ್ನೂ ಈಡೇರಿಸಲಿಲ್ಲ. ಅವರಿಗೆ ನುಡಿದಂತೆ ನಡೆಯಲು ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಪಾಲಿಕೆ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ, ಎಲ್ಲರೂ ಚರ್ಚಿಸಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಬಹಿರಂಗ ಸಭೆಗೆ ನಿರ್ಬಂಧ ಹಾಕಿದ್ದಾರೆ. ನಾವು ದೊಡ್ಡ, ದೊಡ್ಡ ಸಭೆಗಳನ್ನು ಮಾಡಬಹುದು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನಿಯಮಗಳನ್ನು ಪಾಲಿಸಬೇಕಿದೆ. ಆ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ನೀಡಲಾಗಿದೆ ಎಂದಿದ್ದಾರೆ.
ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿ, ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಒಳ್ಳೆಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ, ಸಿದ್ದರಾಮಯ್ಯ ಅವರ ಸರ್ಕಾರ ಬಂದಾಗ ಕೊಟ್ಟ ಕಾರ್ಯಕ್ರಮ ನೀವು ನೋಡಿ. ಶೇ.90 ರಷ್ಟು ಕೆಲಸ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ಇದೆ ಕಾಂಗ್ರೆಸ್ ಪಕ್ಷದ ಶಕ್ತಿ. ಈ ಪ್ರಣಾಳಿಕೆ ಅಧ್ಯಯನ ಮಾಡಿದ್ದೇನೆ. ಒಳ್ಳೆಯ ನಗರವಾಗಿ ಪರಿವರ್ತಿಸಲು, ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ ಎಂದಿದ್ದಾರೆ.
ಬಿಜೆಪಿ ನಾಯಕರು, ಕೇಂದ್ರ ಸಚಿವರು, ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳು ಈ ಭಾಗದವರೇ ಇದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅವರದೇ ಸರ್ಕಾರವಿದ್ದು, ಈ ಪಾಲಿಕೆಯಲ್ಲೂ ಕೂಡ ಪರೋಕ್ಷ ಆಡಳಿತ ನಡೆಸುತ್ತಿದ್ದರು. ಆದರೆ ಇದರಿಂದ ಈ ಜಿಲ್ಲೆಯ ಜನಕ್ಕೆ ಆದ ಲಾಭ ಏನು? ಇದು ಬಿಜೆಪಿ ನಾಯಕರಿಗೆ ನನ್ನ ಮೊದಲ ಪ್ರಶ್ನೆ ಎಂದಿದ್ದಾರೆ.
ಸ್ವಾಭಿಮಾನಿ ಮತದಾರರನ್ನು ಭಾವನಾತ್ಮಕವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಹುಬ್ಬಳ್ಳಿ, ಧಾರವಾಡ ನಗರ ಗುಂಡಿಗಳ ನಗರ. ಇದಕ್ಕೆ ಮತ ಹಾಕಬೇಕಾ?. ಇಡೀ ನಗರದಲ್ಲಿ ಮನೆ, ಮನೆಗೆ ಅಡುಗೆ ಅನಿಲದ ಪೈಪ್ ಲೈನ್ ಹಾಕುತ್ತೇವೆ ಎಂದು ಹೇಳುತ್ತಾರೆ. 370 ರು. ಇದ್ದ ಅಡುಗೆ ಅನಿಲ ಈಗ ಎಷ್ಟಾಗಿದೆ? 800-900 ರು. ಆಗಿದೆ. ಇದಕ್ಕೆ ಮತ ಹಾಕಬೇಕಾ? ಎಂದಿದ್ದಾರೆ.
ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಎಂದು ಹೇಳಿದ್ದರು. ಅದು ಎಲ್ಲಿದೆ ತೋರಿಸಿ, ಹೋಗಿ ನೋಡೋಣ. ನೂತನ ಸಿಬಿಎಸ್ ಸಿ ನಿರ್ಮಾಣ ಎಂದಿದ್ದರು. ಅದು ಎಲ್ಲಿದೆ ನೋಡೋಣ ನಡೀರಿ. ಕಸಮುಕ್ತ, ಆರೋಗ್ಯ ನಗರ ಎಂದು ಹೇಳಿದ್ದರು. ಆದರೆ ಇಲ್ಲಿನ ಧೂಳು ಹೆಚ್ಚಾಗಿದೆ ಎಂದು ಬಿಜೆಪಿ ವಿರುದ್ಧ ಗುಡಿಗಿದ್ದಾರೆ.
ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು ನಡುವೆ ಹೈಸ್ಪೀಡ್ ರೈಲು ಮಾಡುವುದಾಗಿ ಹೇಳಿದ್ದರು. ಅದರ ಪ್ಲಾನಿಂಗ್ ಆಗಿದೆಯಾ? ಬಜೆಟ್ ಆಗಿದೆಯಾ? ಏನೂ ಇಲ್ಲ ಎಂದಿದ್ದಾರೆ. ವಾಹನ ದಟ್ಟಣೆ ನಿಯಂತ್ರಣಕ್ಕೆ ಹೊಸ ವರ್ತುಲ ರಸ್ತೆ ಮಾಡುವುದಾಗಿ ಹೇಳಿದ್ದರು. ಬಯಲು ರಂಗಮಂದಿರ, ನೂತನ ಈಜುಕೊಳ. ಎಲ್ಲಿದೆ ಇವೆಲ್ಲಾ? ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ 10 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ಮಹಿಳಾ ಸಬಲೀಕರಣ, 10 ಬಸ್ ತಂಗು ನಿಲ್ದಾಣ ಮಾಡುವುದಾಗಿ ಹೇಳಿದ್ದರು. ಇವುಗಳಲ್ಲಿ ಯಾವುದನ್ನು ಮಾಡಿದ್ದಾರೆ ತೋರಿಸಲಿ. ಧಾರವಾಡದಲ್ಲಿ 55 ಎಕರೆಯಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣ, ಸ್ಮಾರ್ಟ್ ಸಿಟಿ ಅಂದಿದ್ದರು. ಎಲ್ಲಿದೆ ಅದು? ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ಅಧ್ಯಕ್ಷನಾಗಿ ನಮ್ಮ ಪ್ರಣಾಳಿಕೆಯಲ್ಲಿ ಈ ಮೂರು ಪಾಲಿಕೆ ಚುನಾವಣೆ ನಡೆಯುತ್ತಿರುವ ಎಲ್ಲ ನಗರಗಳಲ್ಲಿ ಒಂದು ಭರವಸೆ ಕೊಟ್ಟಿದ್ದೇನೆ. ಕೋವಿಡ್ ನಿಂದ ನಮ್ಮ ಜನ ಒಂದೂವರೆ ವರ್ಷದಿಂದ ಪರದಾಡಿದ್ದು, ಯಾರಿಗೂ ವ್ಯಾಪಾರ ಇಲ್ಲ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಾಲಿಕೆ ವ್ಯಾಪ್ತಿಯಲ್ಲಿ ಶೇ.50 ರಷ್ಟು ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಬರವಸೆ ನೀಡಿದ್ದಾರೆ.
ಪ್ರಣಾಳಿಕೆಯಲ್ಲಿ ಕೊಟ್ಟ ಮಾತು ನಡೆಸಿಕೊಳ್ಳಲು ಸಾಧ್ಯವಾಗದ ಬಿಜೆಪಿ ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ಜನರ ಮತ ಕೇಳುವ ಹಕ್ಕು ಕಳೆದುಕೊಂಡಿದೆ. ಜನ 15 ವರ್ಷ ನಿಮಗೆ ಅಧಿಕಾರ ಕೊಟ್ಟರೂ ನೀವು ಅವರನ್ನು ತಪ್ಪು ದಾರಿಗೆಳೆದು, ಮೋಸ ಮಾಡುತ್ತಿದ್ದೀರಿ. ಬಿಜೆಪಿ ಕೂಡಲೇ ತಮ್ಮ ಅಭ್ಯರ್ಥಿಗಳನ್ನು ಹಿಂಪಡೆದರೆ ಉತ್ತಮ. ಬಸವಣ್ಣನವರ ನೆಲದಲ್ಲಿ ನೀವು ಸುಳ್ಳಿನ ಸರದಾರರು ಎಂದು ದಾಖಲೆಗಳು ಹೇಳುತ್ತಿವೆ ಎಂದಿದ್ದಾರೆ.
ಬೆಂಗಳೂರಿನ ಜತೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರ್ಗಿ, ಮಂಗಳೂರು, ಮೈಸೂರು ಪಾಲಿಕೆಗಳು ಬೆಳೆಯಬೇಕು. ನಾವು ನುಡಿದಂತೆ ನಡೆಯುತ್ತೇವೆ. ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ನಮಗೆ ಅಧಿಕಾರ ನೀಡಿ. ನಮಗೆ 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಸಂಪೂರ್ಣ ಬಹುಮತ ಪಡೆಯುವ ನಂಬಿಕೆ ಇದೆ. ಕೋವಿಡ್ ಸಮಯದಲ್ಲಿ ಹಾಸಿಗೆ, ಔಷಧ, ಆಂಬ್ಯುಲೆನ್ಸ್, ಹೆಣ ಸುಡಲು ಕ್ಯೂ ನಿಲ್ಲಿಸಿದರು. ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರ ದೇಶದಲ್ಲೇ ನಂ.1. ಹೀಗಾಗಿ ಮುಖ್ಯಮಂತ್ರಿ ಅವರನ್ನು ಬದಲಿಸಿದರು. ಅವರು ಗಳಗಳನೆ ಅತ್ತರು ಎಂದಿದ್ದಾರೆ.
ಬಲಿಷ್ಠ, ಸುಭದ್ರ ಹಾಗೂ ಸ್ವಚ್ಛ ಆಡಳಿತಕ್ಕಾಗಿ ಕಾಂಗ್ರೆಸ್ ಗೆ ಮತ ನೀಡಿ.
ರಾಜಕೀಯದಲ್ಲಿ ಎಲ್ಲ ಪಕ್ಷದಲ್ಲೂ ಬಂಡಾಯ ಸಹಜ. ಪಕ್ಷ ಗೆಲ್ಲುವ ಸಾಧ್ಯತೆ ಇದೆ ಎಂದಾದಾಗ ಆಕಾಂಕ್ಷಿಗಳು ಹೆಚ್ಚುತ್ತಾರೆ. ಬಂಡಾಯವೂ ಹೆಚ್ಚುತ್ತದೆ. ಕೆಲವರ ಜತೆ ಮಾತನಾಡುತ್ತಿದ್ದೇವೆ. ಬೆಲ್ಲದ್ ಅವರು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅವರಿಗಿಂತ ಬೇರೆ ಸಾಕ್ಷಿ ಬೇಡ. ಅವರು ಅವರದೇ ಪಕ್ಷದ ನಾಯಕರು, ಈ ಭಾಗದವರು. ಹೀಗಾಗಿ ಅವರನ್ನು ನಂಬಬೇಕಿದೆ ಎಂದಿದ್ದಾರೆ.
ಪಾಲಿಕೆ ವ್ಯಾಪ್ತಿಗೆ ನಮ್ಮ ಪ್ರಣಾಳಿಕೆ ತಯಾರಿಕೆ ಮಾಡಿದ್ದೇವೆ. ಕಳೆದ 15 ವರ್ಷಗಳಲ್ಲಿ ಏನೂ ಮಾಡದ ಬಿಜೆಪಿ ಈಗ ತಮ್ಮ ಮನೆ, ಬೀದಿ ರಸ್ತೆಗಳನ್ನು ಸರಿ ಮಾಡಿಕೊಳ್ಳುತ್ತಿದ್ದಾರೆ. ಅವರ ವೈಫಲ್ಯಕ್ಕೆ ಇದೇ ಸಾಕ್ಷಿ. ಜನ ಚುನಾವಣೆಯಲ್ಲಿ ಮತದಾನದ ಮೂಲಕ ತಮ್ಮ ಆಕ್ರೋಶ ಹೊರಹಾಕಲಿದ್ದಾರೆ ಎಂದಿದ್ದಾರೆ.
ಕೋವಿಡ್ ವಿಚಾರದಲ್ಲಿ 20 ಲಕ್ಷ ಕೋಟಿ ರುಪಾಯಿ ನೀಡುತ್ತೇವೆ ಎಂದು ಕೇಂದ್ರ, 1600 ಕೋಟಿ ಎಂದು ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿತ್ತು. ಈ ಹಣ ಎಷ್ಟು ಜನರಿಗೆ ತಲುಪಿದೆ ಎಂಬ ಪಟ್ಟಿ ನೀಡಲಿ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗದೆ ಅವರ ಭವಿಷ್ಯಕ್ಕೆ ಕತ್ತಲು ಕವಿದಿದೆ. ಸರ್ಕಾರ ಯಾರಿಗೂ ಸಹಾಯ ಮಾಡಿಲ್ಲ. ಸತ್ತವರಿಗೆ ಪರಿಹಾರ ನೀಡಲಿಲ್ಲ, ಅವರ ಕುಟುಂಬಕ್ಕೆ ಯಾವೊಬ್ಬ ನಾಯಕನೂ ಹೋಗಿ ಸಾಂತ್ವನ ಹೇಳಲಿಲ್ಲ ಎಂದಿದ್ದಾರೆ.
ಕೇಂದ್ರ ಆರೋಗ್ಯ ಮಂತ್ರಿ ಬದಲಾವಣೆ ಮಾಡಿ, ಅವರ ವೈಫಲ್ಯ ಸಾರಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಬದಲಾವಣೆ ಗಾಳಿ ಬೀಸಲು ಆರಂಭವಾಗಿದೆ ಎಂದಿದ್ದಾರೆ.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 2 ವರ್ಷವಾದರೆ, ಕೇಂದ್ರದಲ್ಲಿ 7 ವರ್ಷವಾಗಿದೆ. ಕೇಂದ್ರ ಸರ್ಕಾರವೂ ರಾಜ್ಯಕ್ಕೆ ಕಾರ್ಯಕ್ರಮ ನೀಡಬಹುದು, ಹಣ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಸಮ್ಮಿಶ್ರ ಸರ್ಕಾರ ಇದ್ದಾಗ 150 ಕೋಟಿ ತರಲಾಗಿತ್ತು. ಆದರೆ ಬಿಜೆಪಿ ಸರ್ಕಾರ ವಿಫಲವಾಗಿದೆ. ಜಗದೀಶ್ ಶೆಟ್ಟರ್ ಅವರು ಸರ್ಕಾರದ ಭಾಗವಾಗಿದ್ದರೂ ಹೆಚ್ಚಿನ ಅನುದಾನ ತರಲು ವಿಫಲರಾದರು ಎಂದು ಹೇಳಿದ್ದಾರೆ.