ದೆಹಲಿ : ಆರ್ಜೆಡಿ ನಾಯಕ, ಮಾಜಿ ಸಿಎಂ ಹಾಗೂ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಹಾಗೂ ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ಮತ್ತು ಅವರ ಪುತ್ರಿ ಮಿಸಾ ಭಾರತಿಗೆ 50 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್ ಹಾಗೂ ತಲಾ ಒಬ್ಬರ ಶ್ಯೂರಿಟಿ ಮೇರೆಗೆ ದೆಹಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣ ನಡೆಸಿದ ಪ್ರಕರಣ ಸಂಬಂಧ ಮೂವರಿಗೆ ಜಾಮೀನು ಸಿಕ್ಕಂತಾಗಿದೆ.
ಕೆಲವು ದಿನಗಳ ಹಿಂದೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ 74 ವರ್ಷದ ಲಾಲು ಪ್ರಸಾದ್ ಯಾದವ್, ಇಂದು ಬೆಳಗ್ಗೆ ವ್ಹೀಲ್ ಚೇರ್ನಲ್ಲಿಯೇ ಬೆಳಗ್ಗೆ 10 ಗಂಟೆಗೆ ರೂಸ್ ಅವೆನ್ಯೂ ಕೋರ್ಟ್ ಎದುರು ಹಾಜರಾಗಿದ್ದರು. ಆದರೆ ವಿಚಾರಣೆ ವಿಳಂಬವಾದ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಎದುರು ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ ಹಾಗೂ ಮಿಸಾ ಭಾರತಿ ಹಾಜರಾದರು.
ಲಾಲೂ ಪ್ರಸಾದ್ ಯಾದವ್ 2004 ಹಾಗೂ 2009ರ ನಡುವೆ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಅವರ ಕುಟುಂಬಕ್ಕೆ ಉಡುಗೊರೆ ರೂಪದಲ್ಲಿ ನೀಡಿದ ಜಮೀನುಗಳಿಗೆ ಪ್ರತಿಯಾಗಿ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಿಬಿಐ ತನ್ನ ಚಾರ್ಜ್ಶೀಟ್ನಲ್ಲಿ ರೈಲ್ವೆ ಇಲಾಖೆಯಲ್ಲಿ ಅನಿಯಮಿತ ನೇಮಕಾತಿಯನ್ನು ಮಾಡಲಾಗಿದೆ. ಈ ನೇಮಕಾತಿಯನ್ನು ಮಾಡುವ ಸಂದರ್ಭದಲ್ಲಿ ಭಾರತೀಯ ರೈಲ್ವೆ ನಿಯಮಗಳು ಹಾಗೂ ಕಾರ್ಯ ವಿಧಾನಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ .
ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವ ಸಲುವಾಗಿ ಅಭ್ಯರ್ಥಿಗಳು ನೇರವಾಗಿ ಅಥವಾ ಕುಟುಂಬ ಸದಸ್ಯರ ಮೂಲಕ ಲಾಲು ಪ್ರಸಾದ್ ಯಾದವ್ ಕುಟುಂಬಕ್ಕೆ ಆಗಿನ ಮಾರುಕಟ್ಟೆ ದರದ ಐದನೇ ಒಂದು ಭಾಗದ ಹೆಚ್ಚಿನ ರಿಯಾಯಿತಿಯಲ್ಲಿ ಭೂಮಿ ಮಾರಾಟ ಮಾಡಿದ್ದರು ಎಂಬ ಆರೋಪ ಎದುರಾಗಿತ್ತು.