ಮಂಡ್ಯ: ಕರ್ತವ್ಯದ ವೇಳೆ ಮೊಬೈಲ್ ಫೋನ್‌ನಲ್ಲಿ ರೀಲ್ಸ್ ವೀಕ್ಷಣೆ ಮಾಡಿಕೊಂಡು ಬಸ್ ಚಾಲನೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ(KSRTC) ಬಸ್ ಚಾಲಕನೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ನಗರದ ಕೆಎಸ್‌ಆರ್‌ಟಿಸಿ ಡಿಪೋ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ. ಮಹೇಶ್ ಅಮಾನತುಗೊಂಡ ಚಾಲಕ. ಶುಕ್ರವಾರ ನಗರದ ಸಾರಿಗೆ ಬಸ್ ನಿಲ್ದಾಣದಿಂದ ಕೆಎ 11 ಎಫ್ 547 ನೋಂದಣಿ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಮೈಸೂರಿಗೆ ತೆರಳುತ್ತಿದ್ದ ವೇಳೆ, ಚಾಲಕ ವಿ.ಮಹೇಶ್ ತಮ್ಮ ಮೊಬೈಲ್ ಫೋನ್‌ನಲ್ಲಿ ರೀಲ್ಸ್ ನೋಡುತ್ತಾ ಬಸ್ ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ.

ಈ ದೃಶ್ಯವನ್ನು ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು, ಚಾಲಕನ ನಿರ್ಲಕ್ಷ್ಯ ಚಾಲನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ನಂತರ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಇಲಾಖೆ ಮೇಲಧಿಕಾರಿಗಳು ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಶರಣ ಬಸವರಾಜು ಅವರು ಕರ್ತವ್ಯ ಲೋಪದ ಆರೋಪದಡಿ ಚಾಲಕ ವಿ.ಮಹೇಶ್ ವಿರುದ್ಧ ಅಮಾನತು ಆದೇಶ ಹೊರಡಿಸಿದ್ದಾರೆ.






