ಬೀದರ್: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ, ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಕುರಿತಾಗಿ ಭಾರೀ ಚರ್ಚೆಗಳು, ಊಹಾಪೋಹಗಳು ಜೋರಾಗಿರುವ ನಡುವೆಯೇ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ(Kodi Shree Swamiji )ಅವರು ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ಹಾಗೂ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ರಾಜಕೀಯದಲ್ಲಿ ಯಾವುದೇ ಮಹತ್ವದ ಬದಲಾವಣೆ ನಡೆಯುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಶ್ರೀಗಳು ಸ್ಪಷ್ಟವಾಗಿ ಹೇಳಿದ್ದಾರೆ.

ಬೀದರ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಯುಗಾದಿ ಹಬ್ಬದವರೆಗೂ ಮುಖ್ಯಮಂತ್ರಿ ಬದಲಾವಣೆ ಆಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸಿದ್ದರಾಮಯ್ಯ ಅವರು ಅವರಾಗಿಯೇ ನಿರ್ಧಾರ ಮಾಡಿ ಅಧಿಕಾರ ತ್ಯಜಿಸಿದರೆ ಮಾತ್ರ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ಯಾರಿಂದಲೂ ಅವರನ್ನು ಇಳಿಸಲು ಸಾಧ್ಯವಿಲ್ಲ. ಅಲ್ಲದೇ ಯುಗಾದಿ ನಂತರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ನೀಡುವುದಾಗಿ ಹೇಳಿದರು.

ಹಾಲುಮತ ಸಮಾಜದ ಹಿನ್ನೆಲೆ – ಅಧಿಕಾರ ಬಿಡುವುದು ಸುಲಭವಲ್ಲ
ಸಿದ್ದರಾಮಯ್ಯ ಅವರ ಸಾಮಾಜಿಕ ಹಿನ್ನೆಲೆ ಕುರಿತು ಮಾತನಾಡಿದ ಶ್ರೀಗಳು, ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಹಾಲುಮತ ಸಮಾಜಕ್ಕೆ ದೀರ್ಘ ಇತಿಹಾಸವಿದೆ. ಈ ಸಮಾಜದವರು ಅಧಿಕಾರಕ್ಕೆ ಬಂದರೆ ಅದನ್ನು ಸುಲಭವಾಗಿ ಬಿಡುವುದಿಲ್ಲ. ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಹಕ್ಕ-ಬುಕ್ಕರು, ಛತ್ರಪತಿ ಶಿವಾಜಿ ಮಹಾರಾಜರು, ಕಾಶಿಯ ರಾಣಿ ಅಹಲ್ಯಾಬಾಯಿ ಹೋಳ್ಕರ್ ಇದೇ ಪ್ರಾಚೀನ ಹಾಲುಮತ ಸಮಾಜಕ್ಕೆ ಸೇರಿದವರು. ದೈವತ್ವಕ್ಕೆ ಹತ್ತಿರವಾದ ಸಮಾಜದಿಂದ ಬಂದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ. ಅಂತಹ ನಾಯಕನನ್ನು ಅಧಿಕಾರದಿಂದ ಇಳಿಸುವುದು ಸುಲಭವಲ್ಲ ಎಂದರು.

ಡಿ.ಕೆ. ಶಿವಕುಮಾರ್ ಸಿಎಂ ವಿಚಾರಕ್ಕೆ ಇನ್ನೂ ಕಾಲ ಬಂದಿಲ್ಲ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಆಕಾಂಕ್ಷೆ ಕುರಿತು ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಡಿ.ಕೆ. ಶಿವಕುಮಾರ್ ಅವರು ನಮಗೆ ಆತ್ಮೀಯರು. ಆದರೆ ಅವರ ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಈಗಲೇ ಮಾತನಾಡುವ ಸಂದರ್ಭ ಬಂದಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕೋಡಿಮಠದ ಶ್ರೀಗಳ ಈ ಭವಿಷ್ಯ ನುಡಿಗೆ ರಾಜ್ಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದ್ದು, ಸಿಎಂ ಸ್ಥಾನ ಬದಲಾವಣೆ ಕುರಿತ ಊಹಾಪೋಹಗಳಿಗೆ ಹೊಸ ತಿರುವು ಸಿಕ್ಕಂತಾಗಿದೆ.











