ಮಡಿಕೇರಿ ;ಮುಸ್ಲಿಮರ ಗುಂಪೊಂದು ಕೊಡವ ಮಹಿಳೆಯೊಬ್ಬರ ಮನೆಯ ಆವರಣಕ್ಕೆ ಪ್ರವೇಶಿಸಿ ನೀವು ವಕ್ಫ್ ಆಸ್ತಿಯನ್ನು ಅತಿಕ್ರಮಿಸಿಕೊಂಡು ಮನೆ ಕಟ್ಟಿದೀರ , ತೆರವುಗೊಳಿಸಿ ಎಂದು ಬೆದರಿಕೆ ಒಡ್ಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಈ ಕುರಿತು ಕೊಡಗು ಜಿಲ್ಲಾ ಪೋಲೀಸ್ ಅಧಿಕಾರಿಯವರಿಗೆ ದೂರು ನೀಡಿರುವ ಪುಚ್ಚಿಮಾಡ ರೇಣುಕಾ ಉತ್ತಪ್ಪ ಅವರು ತಾವು ತಮ್ಮ ಕುಶಾಲನಗರದ ಮುಳ್ಳುಸೋಗೆ ಯಲ್ಲಿ ಮನೆಯಲ್ಲಿ ಒಬ್ಬರೇ ಇರುವಾಗ ಈರ್ವರು ಮುಸ್ಲಿಮರು ಬಂದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದು ದೂರಿನ ಸಾರಾಂಶ ಈ ಕೆಳಗಿನಂತಿದೆ.
ತಾವು ಬೆಂಗಳೂರಿನಲ್ಲಿ ಖಾಸಗೀ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಮುಳ್ಳುಸೋಗೆಯಲ್ಲಿ ಪಿತ್ರಾರ್ಜಿತ ಮನೆ ಹೊಂದಿದ್ದಾರೆ. ದಿನಾಂಕ 25.10.2024 ರಂದು ಬೆಳಿಗ್ಗೆ 11 ಗಂಟೆಗೆ, ತಾವೊಬ್ಬರೇ ಮನೆಯಲ್ಲಿ ಇರುವಾಗ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಮನೆಯ ಆವರಣಕ್ಕೆ ಪ್ರವೇಶಿಸಿ ಇದು ವಕ್ಫ್ ಆಸ್ತಿ ಆಗಿದ್ದು ಮನೆಯನ್ನು ತಕ್ಷಣವೇ ತೆರವುಗೊಳಿಸಿ ವಕ್ಫ್ ಗೆ ಒಪ್ಪಿಸುವಂತೆ ಬೆದರಿಸಿದರು. ಆಗ ನಾನು ನನ್ನ ತಂದೆ 1984 ರಲ್ಲಿ ಮುಳ್ಳುಸೋಗೆ ಯಲ್ಲಿ ಸರ್ವೆ ನಂಬರ್ 79/2 ರಲ್ಲಿ 36 ಸೆಂಟ್ಸ್ ಜಮೀನನ್ನು ಮಾನ್ಯಪಂಡ ಬೋಪಣ್ಣ ಎಂಬುವವರಿಂದ ಖರೀದಿಸಿದ್ದು.
ಅಂದಿನಿಂದ ನಾವು ಹೇಳಿದ ಆಸ್ತಿಯಲ್ಲಿ ವಾಸಿಸುತ್ತಿದ್ದೇವೆ, ಇತ್ತೀಚೆಗೆ ನನ್ನ ಪೋಷಕರು ನಿಧನರಾದರು, ನಾನು ಹೇಳಿದ ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆದಿದ್ದೇನೆ. ಏಕೆ ತೆರವುಗೊಳಿಸಬೇಕು ? ನಿಮ್ಮ ಬಳಿ ಯಾವುದಾದರೂ ನ್ಯಾಯಾಲಯದ ನೋಟೀಸ್ ಅಥವಾ ವಕ್ಫ್ ಗೆ ಸೇರಿರುವುದಕ್ಕೆ ದಾಖಲೆ ಕೊಡಿ ಎಂದು ಪ್ರಶ್ನಿಸಿದೆ.
ಆಗ ಅವರು ನೀವು ಮನೆ ಖಾಲಿ ಮಾಡದಿದ್ದರೆ ಹೊರಗೆ 15 ಜನರು ಇದ್ದಾರೆ ಅವರನ್ನು ಕರೆಯುವುದಾಗಿಯೂ ಮತ್ತು ಹೆಚ್ಚಿನ ಜನರನ್ನು ಕರೆತರುವುದಾಗಿಯೂ ಬೆದರಿಸಿದರು ಎಂದು ತಿಳಿಸಿದ್ದಾರೆ. ಆಗ ಮಹಿಳೆಯು ಕೂಡಲೇ ಮನೆಯ ಆವರಣದಿಂದ ಹೊರ ಹೋಗುವಂತೆ ಗದರಿಸಿದ್ದಾರೆ. ಆಗ ಅವರು ನಮಗೆ ಷರಿಯಾ ಕೋರ್ಟ್ ಇದೆ ನೀವು ಬೆಂಗಳೂರಿನ ಷರಿಯಾ ಕೋರ್ಟಿಗೆ ಬರಬೇಕಾಗುತ್ತದೆ ಅಲ್ಲಿ ನಿಮ್ಮ ಮಾಲೀಕತ್ವ ಸಾಬೀತುಪಡಿಸಬೇಕು ಎಂದು ಬೆದರಿಸಿ ಸ್ಥಳದಿಂದ ತೆರಳಿದ್ದಾರೆ ಎಂದು ಆರೋಪಿಸಿದ್ದಾರೆ.ಅಲ್ಲದೆ ಕೊಡವ ಸಮಾಜದ ಒಕ್ಕೂಟ ಗಳ ಅದ್ಯಕ್ಷರಿಗೂ ಸೂಕ್ತ ನೆರವು ನೀಡುವಂತೆ ಕೋರಿ ದೂರು ಸಲ್ಲಿಸಿದ್ದಾರೆ.
ಈ ಕುರಿತು ಕುಶಾಲನಗರ ಪೋಲೀಸರು ತನಿಖೆ ನಡೆಸುತಿದ್ದು ಸೋಮವಾರ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ವರದಿ – ಕೋವರ್ ಕೊಲ್ಲಿ ಇಂದ್ರೇಶ್