ಕಲಬುರಗಿ (Kalaburagi) ಜಿಲ್ಲೆಯ ಆಳಂದದಲ್ಲಿ ದರ್ಗಾ-ಶಿವಲಿಂಗ ವಿವಾದ ಭುಗಿಲೆದ್ದಿದ್ದು, ತೀವ್ರ ಮತೀಯ ಸಂಘರ್ಷಕ್ಕೆ ಕಾರಣವಾಗಿದೆ. ಮಾರ್ಚ್ 1 ರಂದು ಸ್ಥಳೀಯ ದೇಗುಲ ಪ್ರವೇಶ ವಿಚಾರವಾಗಿ ಹಿಂದೂ ಮತ್ತು ಮುಸ್ಲಿಂ ಗುಂಪುಗಳ (Hindu and Muslim groups) ನಡುವೆ ಜಟಾಪಟಿ ನಡೆದಿದೆ. ಈ ಹಿನ್ನೆಲೆಯಲ್ಲಿ 167 ಜನರನ್ನು ಬಂಧಿಸಲಾಗಿದೆ ಮತ್ತು ಐದು ಎಫ್‌ಐಆರ್ (five First Information Reports ) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರೆ, ಆಳಂದ ತಾಲೂಕಿನಾದ್ಯಂತ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಮಾರ್ಚ್ 5ರ ಬೆಳಗ್ಗೆ 6 ಗಂಟೆ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಆದೇಶ ಹೊರಡಿಸಿದ್ದಾರೆ.
ಸೋಮವಾರ ಲಾಡಲ್ ಮಶಾಕ್ ದರ್ಗಾಕ್ಕೆ (Ladle Mashak Dargah) ಪ್ರವೇಶ ಪಡೆಯಲು ಎರಡೂ ಗುಂಪುಗಳು ನಡೆಸಿದ ಪ್ರಯತ್ನದಲ್ಲಿ ಕಲ್ಲು ತೂರಾಟ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ ಆರೋಪದ ಮೇಲೆ ಮುಸ್ಲಿಮರ (Muslims ) ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ . ಫೆಬ್ರವರಿ 27 ರಿಂದ ಮಾರ್ಚ್ 3ರವರೆಗೆ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಿದ್ದರೂ ಸಹ ಮತೀಯ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಆಳಂದ ಪೊಲೀಸರು ಹೇಳಿದ್ದಾರೆ.
ಶ್ರೀರಾಮ ಸೇನೆ, ಬಲಪಂಥೀಯ ಗುಂಪು (Sree Rama Sene, the right-wing group) ಮಾರ್ಚ್ 1 ರಂದು ಮಹಾಶಿವರಾತ್ರಿಯ ಪ್ರಯುಕ್ತ ಲಾಡಲ್ ಮಶಕ್ ದರ್ಗಾದ ಒಳಗಿರುವ ರಾಘವ ಚೈತನ್ಯ ಶಿವಲಿಂಗವನ್ನು (Raghava Chaitanya Shivalinga) ಶುದ್ಧೀಕರಿಸಲು ಮತ್ತು ಸ್ವಚ್ಛಗೊಳಿಸುವ ಪ್ರಸ್ತಾಪದ ನಂತರ ಉದ್ವಿಗ್ನತೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿರುವ ಪ್ರಾಚೀನ ಶಿವಲಿಂಗಕ್ಕೆ ಕಳೆದ ನವೆಂಬರ್ನಲ್ಲಿ ಅಪಚಾರ ಮಾಡಿದ್ದನ್ನು ಖಂಡಿಸಿ ಮಂಗಳವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ‘ಆಳಂದ ಚಲೋ’ ನಡೆಸಿ ದರ್ಗಾದೊಳಗೆ ಪ್ರವೇಶಿಸಲು ಯತ್ನಿಸಿದ್ದು ಮತೀಯ ಸಂಘರ್ಷಕ್ಕೆ ಕಾರಣವಾಯಿತು.
ಗುಂಪು ಘರ್ಷಣೆ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕಲಬುರಗಿ ಜಿಲ್ಲಾಡಳಿತವು ಆಳಂದದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳವಾರ ಎಲ್ಲಾ ಸಮುದಾಯಗಳಿಗೆ ದರ್ಗಾ ಪ್ರವೇಶವನ್ನು ನಿರ್ಬಂಧಿಸಿದೆ. ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಮತ್ತು ಕೆಲವರನ್ನು ಉದ್ರೇಕಕಾರಿ ಭಾಷಣ ಮಾಡುವವರಿಗೆ ಜಿಲ್ಲೆಯಿಂದ ನಿರ್ಬಂಧಿಸಲಾಗಿದೆ.

ಆದರೆ, ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಸ್ಥಳೀಯ ಬಿಜೆಪಿ ಶಾಸಕರು ಸೇರಿದಂತೆ ಭಾರತೀಯ ಜನತಾ ಪಕ್ಷದ ಮುಖಂಡರು ಮಂಗಳವಾರ ದರ್ಗಾಕ್ಕೆ ಮೆರವಣಿಗೆ ನಡೆಸಿದರು. ದರ್ಗಾಕ್ಕೆ ಪ್ರವೇಶ ಪಡೆಯಲು ರಾಜಕಾರಣಿಗಳ ನೇತೃತ್ವದ ಬಲಪಂಥೀಯ ಗುಂಪುಗಳ ಪ್ರಯತ್ನವನ್ನು ಕೇಳಿದ ನಂತರ ಮುಸ್ಲಿಮರು ಕೂಡ ದರ್ಗಾ ಬಳಿ ಜಮಾಯಿಸಿದರು.
“ಕೆಲವು ಬಲಪಂಥೀಯ ಗುಂಪುಗಳು ಶುದ್ಧೀಕರಣ ಮಾಡಲೇಬೇಕು ಎಂದು ಒತ್ತಾಯಿಸಿದ್ದರಿಂದ ಉದ್ವಿಗ್ನತೆ ಸಂಭವಿಸಿದೆ. ನಾವು ಶಾಂತಿ ಸಭೆಗೆ ಕರೆದಿದ್ದೇವೆ ಮತ್ತು ಎರಡೂ ಸಮುದಾಯದ ಸಣ್ಣ ಗುಂಪುಗಳಿಗೆ ದರ್ಗಾ ಪ್ರವೇಶಿಸಲು ಒಪ್ಪಿಗೆ ನೀಡಲಾಯಿತು ಆದರೂ ಉಭಯ ಕೋಮಿನವರ ಪ್ರತಿಭಟನೆ, ವಾಗ್ವಾದ, ತಿಕ್ಕಾಟ ನಡೆದಿದೆ ಎಂದು ಆಳಂದ ಉಪ ಪೊಲೀಸ್ ವರಿಷ್ಠಾಧಿಕಾರಿ ವೀರಯ್ಯ ಹಿರೇಮಠ ಹೇಳಿದರು. ಧಾರ್ಮಿಕ ವಿಧಿವಿಧಾನಕ್ಕೆ ಮುಖಂಡರು ಒಪ್ಪಿಗೆ ಸೂಚಿಸಿದ್ದರೂ, ಈ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರದ ಉದ್ವಿಗ್ನತೆಯಲ್ಲಿ ಐಜಿಪಿ, ಡಿಸಿ ಮತ್ತು ಇತರ ಹಲವು ಪೊಲೀಸ್ ಅಧಿಕಾರಿಗಳ ವಾಹನಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಡಿಎಸ್ಪಿ ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪೆಸ್ ವರದಿ ಮಾಡಿದೆ.
ಆಳಂದದ ಸ್ಥಳೀಯ ಅಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ಬಿಜೆಪಿ ನಾಯಕರಿಗೆ ಮೆರವಣಿಗೆ ನಡೆಸಲು ಅವಕಾಶ ಮಾಡಿಕೊಟ್ಟು ಉದ್ವಿಗ್ನತೆಯನ್ನು ಉಂಟುಮಾಡಿದ್ದಾರೆ ಎಂದು ಆಳಂದದ ಮಾಜಿ ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಬುಧವಾರಆರೋಪಿಸಿದ್ದಾರೆ.
ಮುಸ್ಲಿಮರು ಹಿಂಸಾಚಾರಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಐದು ಪ್ರಕರಣಗಳನ್ನು ದಾಖಲಿಸಿದ್ದಾರೆ. “ಹಿಂಸಾಚಾರದ ಸಂದರ್ಭದಲ್ಲಿ ಮುಸ್ಲಿಮರು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿದ್ಧಾರೆ. ಕಲ್ಲು ತೂರಾಟ ಮತ್ತು ದಾಳಿಗೆ ಸಿದ್ಧತೆ ನಡೆಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಉದ್ವಿಗ್ನತೆಯ ಸಂದರ್ಭದಲ್ಲಿ ಇಬ್ಬರು ಸಾವನ್ನಪ್ಪಿದ ವರದಿಗಳನ್ನು ಆಳಂದ ಪೊಲೀಸರು ನಿರಾಕರಿಸಿದ್ದಾರೆ. ನೈಸರ್ಗಿಕ ಕಾರಣಗಳಿಂದ ಸಂಭವಿಸಿದ ಸಾವುಗಳ ಬಗ್ಗೆ ಕೆಲವು ಸುಳ್ಳು ಪ್ರಚಾರಗಳು ನಡೆಯುತ್ತಿವೆ ಎಂದು ಡಿಎಸ್ಪಿ ಹಿರೇಮಠ ಹೇಳಿದರು.
ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಇತರರು ಒಳಹೋಗಿ ಶಿವಲಿಂಗ ಶುದ್ಧೀಕರಣ ಮಾಡಿ ಪೂಜೆ ಸಲ್ಲಿಸಿದರು. ಆದರೆ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಸಿ. ಆರ್. ಪಿ. ಸಿ ಕಾಯ್ದೆ-1973ರ ಕಲಂ 144, 144ಎ ಅನ್ವಯ ಆಳಂದ ತಾಲೂಕಿನಾದ್ಯಂತ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಮಾರ್ಚ್ 5ರ ಬೆಳಗ್ಗೆ 6 ಗಂಟೆ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಆದೇಶ ಹೊರಡಿಸಿದರು.
ಏನಿದು ವಿವಾದ?
ಆಳಂದ ಪಟ್ಟಣದ ಲಾಡ್ಲೇಮಶಾಕ್ ದರ್ಗಾ ಅಂಗಳದಲ್ಲೇ ಪ್ರಾಚೀನ ‘ರಾಘವ ಚೈತನ್ಯ’ ಶಿವಲಿಂಗವಿದೆ. ಕಳೆದ ನವೆಂಬರ್ನಲ್ಲಿ ದುಷ್ಕರ್ಮಿಗಳು ಈ ಲಿಂಗಕ್ಕೆ ಅಪಚಾರ ಮಾಡಿ ವಿಕೃತಿ ಮೆರೆದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅಪಚಾರಕ್ಕೊಳಗಾದ ಶಿವಲಿಂಗವನ್ನು ಶುದ್ಧೀಕರಿಸಿ ಪೂಜಿಸಲು ಹಿಂದೂ ಸಂಘಟನೆಗಳು ಶಿವರಾತ್ರಿಯ ಮುಹೂರ್ತ ನಿಗದಿಪಡಿಸಿ, ಆಳಂದ ಚಲೋ ಹಮ್ಮಿಕೊಂಡಿದ್ದವು. ಈ ನಡುವೆ ಹಿಂದೂ ಮುಸ್ಲಿ ಸಮದಾಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.