ಎರಡು ದಿನಗಳ ಹಿಂದೆಯಷ್ಟೇ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಮತ್ತೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ಪಂಕಜ್ಕುಮಾರ್ ಪಾಂಡೆಯನ್ನು ನಿವೃತ್ತಿಗೊಳಿಸಿ ಈ ಜವಾಬ್ದಾರಿಯನ್ನು ಕಪಿಲ್ ಮೋಹನ್ರನ್ನು ನೇಮಿಸಲಾಗಿದೆ.
ಸಹಕಾರ ಇಲಾಖೆಗೆ ಅಪರ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಮಂಜುನಾಥ್ ಪ್ರಸಾದ್, ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿ ವಿ . ಅನ್ಬುಕುಮಾರ್ರನ್ನು ನೇಮಿಸಲಾಗಿದೆ. ವಿ.ಅನ್ಬುಕ್ಕುಮಾರ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು .ಸಹಕಾರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ಎಸ್.ಆರ್. ಅವರನ್ನು ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ) ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಮೋಹನ್ ರಾಜ್ ಕೆ.ಪಿ. ಅವರನ್ನು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯನ್ನು ರಾಜೇಂದರ್ ಕುಮಾರ್ ಕಟಾರಿಯಾ ಅವರು ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದರು. ಅವರನ್ನು ಈ ಸೇವೆಯಿಂದ ಮುಕ್ತಿಗೊಳಿಸಲಾಗಿದೆ.ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ಸದಸ್ಯ ಗಿರೀಶ್ ಆರ್. ಅವರನ್ನು ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಸಾಂಖ್ಯಿಕ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿ’ಸೋಜಾ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಎಂಎಸ್ಎಂಇ ಮತ್ತು ಗಣಿ) ಸರ್ಕಾರದ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯನ್ನು ಪಂಕಜ್ ಕುಮಾರ್ ಪಾಂಡೆ ಅವರು ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದರು.

ಅಟಲ್ ಸ್ನೇಹಿ ಕೇಂದ್ರ (AJSK)ದ ನಿರ್ದೇಶಕ ಗಂಗೂ ಬಾಯಿ ರಮೇಶ್ ಮನಕರ್ ಅವರನ್ನು ವರ್ಗಾವಣೆಗೊಳಿಸಿ ತೆರವಾದ ಸ್ಥಾನಕ್ಕೆ ಕರೀಗೌಡ ಅವರನ್ನು ನೇಮಿಸಿ ಆದೇಶಿಸಲಾಗಿದೆ. ತುಮಕೂರು ಉಪ ಜಿಲ್ಲಾಧಿಕಾರಿ ಪಾಟೀಲ್ ಯಲಗೌಡ ಶಿವನಗೌಡ ಅವರನ್ನು ಶರತ್ ಬಿ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದ ಕೃಷಿ ಇಲಾಖೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಶರತ್ರನ್ನು ಈ ಸೇವೆಯಿಂದ ಮುಕ್ತಿಗೊಳಿಸಲಾಗಿದೆ.

ಜಗದೀಶ ಜಿ ಅವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕಗೊಂಡಿದ್ದಾರೆ.. ಈ ಹುದ್ದೆಯನ್ನು ಡಾ. ರಾಮ್ ಪ್ರಶಾಂತ್ ಮನೋಹರ್ ವಿ ಅವರು ನಿಭಾಯಿಸುತ್ತಿದ್ದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವ್ಯವಸ್ಥಾಪಕ ನಿರ್ದೇಶ ಡಾ. ಮಹೇಶ್ ಎಂ ಅವರನ್ನು ಗಿರೀಶ್ ಆರ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ಸದಸ್ಯರನ್ನಾಗಿ ನೇಮಿಸಲಾಗಿದೆ.






