ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಎದುರಿಸಲು ಸಂಘಟನಾತ್ಮಕ ಚಟುವಟಿಕೆಯ ಸಲುವಾಗಿ ಬಿಜೆಪಿಯು ತನ್ನ ಕಾರ್ಯಕರ್ತರಿಗೆ ಪ್ರಾಥಮಿಕ ಆರೋಗ್ಯ ಸೇವೆಯ ತರಬೇತಿ ಕೊಡುವುದಾಗಿ ಯೋಜನೆ ಹಾಕಿಕೊಂಡಿದೆ.

ಬೂತ್ ಮಟ್ಟದ ಕಾರ್ಯಕರ್ತರು ಸೇರಿದಂತೆ ಪಕ್ಷದ ಎರಡು ಲಕ್ಷ ಕಾರ್ಯಕರ್ತರಿಗೆ ಆಕ್ಸಿಮೀಟರ್ ಬಳಸುವುದು, ರಕ್ತದೊತ್ತಡವನ್ನು ಅಳೆಯುವುದು, ಕೋವಿಡ್ -19 ಕಿಟ್ಗಳನ್ನು ನಿರ್ವಹಿಸುವುದು ಮತ್ತು ತುರ್ತು ಆರೈಕೆ ಒದಗಿಸುವುದು ಕುರಿತು ತರಬೇತಿ ನೀಡಲಾಗುವುದು ಎಂದು ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ತಿಳಿಸಿದ್ದಾರೆ.
‘ಸೇವೆಯೇ ಸಂಘಟನೆ’ ಪರಿಕಲ್ಪನೆಯಲ್ಲಿ ಪಕ್ಷದ ಕಾರ್ಯಕರ್ತರು ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ತೊಡಗಲಿದ್ದಾರೆ. ಪ್ರತಿಯೊಂದು ಬೂತ್ ಕೂಡಾ ವ್ಯಾಕ್ಸಿನೇಷನ್ ಮಾಡುವುದು ಗುರಿ ಎಂದು ಹೇಳಿದ್ದಾರೆ.
ಜುಲೈ 1 ರಿಂದ 15 ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಹೈಬ್ರಿಡ್ ಕಾರ್ಯಕಾರಿ ಸಭೆಗಳು ನಡೆಯಲಿವೆ. ಜುಲೈ 16 ರಿಂದ 30 ರವರೆಗೆ ಹೈಬ್ರಿಡ್ ಕಾರ್ಯಕಾರಿ ಸಭೆಗಳು ಮಂಡಲಗಳಲ್ಲಿ ನಡೆಯಲಿವೆ.

ಸಭೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸೆಂಬರ್ನಲ್ಲಿ ನಡೆಯಲಿರುವ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ಸಿದ್ಧತೆ ಆರಂಭಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಈ ಚುನಾವಣೆಯ ದೃಷ್ಟಿಯಿಂದ ಪಕ್ಷವು ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಭೆ ಕರೆಯುವ ಸಾಧ್ಯತೆ ಇದೆ.





