ಸೈಬರ್ ವಂಚಕರು ರಾಜಕೀಯ ನಾಯಕರ ಹೆಸರಿನಲ್ಲಿ, ಸಿನಿಮಾ ನಟ ನಟಿಯರ ಹೆಸರಿನಲ್ಲಿ ಅಮಾಯಕ ಜನರಿಗೆ ವಂಚಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಕಾಂತಾರ ಚಾಪ್ಟರ್-೧ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಅವರಿಗೂ ಈ ಸಮಸ್ಯೆ ಎದುರಾಗಿದೆ.

ವ್ಯಕ್ತಿಯೊಬ್ಬ ನಕಲಿ ನಂಬರ್ ಬಳಸಿಕೊಂಡು ನಟಿ ರುಕ್ಮಿಣಿ ವಸಂತ್ ಹೆಸರರಿನಲ್ಲಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ರುಕ್ಮಿಣಿ ವಸಂತ ಅವರೇ ಮಾಹಿತಿ ಹಂಚಿಕೊಂಡಿದ್ದು, ಸೈಬರ್ ವಂಚಕರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರುಕ್ಮಿಣಿ ವಸಂತ್, 9445893273 ನಂಬರ್ ಬಳಸಿ ವ್ಯಕ್ತಿಯೋರ್ವ ನನ್ನ ಹೆಸರಿನಲ್ಲಿ ಅನೇಕರಿಗೆ ಕರೆ ಮಾಡಿ ಮೋಸ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಮೊಬೈಲ್ ಸಂಖ್ಯೆ ನನಗೆ ಸೇರಿದ್ದಲ್ಲ. ಇದರಿಂದ ಬರುವ ಮೆಸೇಜ್ ಅಥವಾ ಕರೆ ಬಂದರೆ ಅದು ಸಂಪೂರ್ಣವಾಗಿ ವಂಚನೆಯ ಕರೆ. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಹಾಗೂ ಅವರೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಡಿ.

ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ಪಡೆಯಲು ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು. ಈ ರೀತಿ ಮೋಸ ಮಾಡುವುದು ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತದೆ. ವಂಚನೆ ಮತ್ತು ದಾರಿ ತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ ಎಂದು ರುಕ್ಮಿಣಿ ವಸಂತ್ ಬರೆದುಕೊಂಡಿದ್ದಾರೆ.







