ಬೆಂಗಳೂರು: ದೇಶದಾದ್ಯಂತ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ದೇಶದಲ್ಲಿ ನಡೆಯುವ ಪರೀಕ್ಷಾ ಅಕ್ರಮಗಳ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಸಾವಿರಾರು ವಿದ್ಯಾರ್ಥಿ ಹೋರಾಟಕ್ಕೆ ನಟ ಯುವ ರಾಜ್‌ಕುಮಾರ್ ಬೆಂಬಲ ಸೂಚಿಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯುವ ರಾಜ್‌ಕುಮಾರ್, ʼಈ ಪೋಸ್ಟ್ ಯಾವುದೇ ರಾಜಕೀಯ ಪಕ್ಷದ ಪರವೂ ಅಲ್ಲ, ವಿರೋಧವೂ ಅಲ್ಲ. ಇದು ಮಾನವೀಯತೆಯ ಬಗ್ಗೆ. ದೆಹಲಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಸುಮ್ಮನೆ ನೋಡುತ್ತಾ ಹೋಗಬಾರದು. ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಒಂದೇ ವಿಚಾರಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಧ್ವನಿಯನ್ನು ಕೇಳುವುದು, ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿʼ.

ʼಯಾರು ಹೊಣೆ? ಈ ಪರಿಸ್ಥಿತಿ ತಪ್ಪಿಸಬಹುದಿತ್ತೇ? ವಿದ್ಯಾರ್ಥಿಗಳಿಗೆ ಗಾಯಗಳಾಗಲು ಕಾರಣವೇನು? ಇಂತಹ ಘಟನೆಗಳು ಮತ್ತೆ ನಡೆಯದಂತೆ ನಾವು ಏನು ಮಾಡಬೇಕು? ಪ್ರತಿಯೊಬ್ಬ ನಾಗರಿಕನಿಗೂ ಮಾಹಿತಿ ತಿಳಿದುಕೊಳ್ಳುವ ಜವಾಬ್ದಾರಿ ಇದೆ. ನೆಲಮಟ್ಟದಲ್ಲಿರುವವರ ಧ್ವನಿಯನ್ನು ಆಲಿಸಿ. ಸತ್ಯಾಂಶಗಳನ್ನು ತಿಳಿದುಕೊಳ್ಳಿ. ಕಷ್ಟದ ಪ್ರಶ್ನೆಗಳನ್ನೂ ಕೇಳಿ. ನಿಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಿ.

ʼಒಂದು ರಾಷ್ಟ್ರ ತನ್ನ ಜನರು ಕಣ್ಮುಚ್ಚಿ ನೋಡುವುದನ್ನು ಬಿಟ್ಟು, ಮಾನವೀಯತೆಯ ಪರ ನಿಂತು, ಹೊಣೆಗಾರಿಕೆಯನ್ನು ಕೇಳಿದಾಗ ಇನ್ನಷ್ಟು ಬಲವಾಗುತ್ತದೆ. ಇದು ನಮ್ಮೆಲ್ಲರ ಸಮಸ್ಯೆ. ಏಕೆಂದರೆ ಒಂದು ರಾಷ್ಟ್ರದ ಭವಿಷ್ಯವನ್ನು ಅದರ ಜನರ ಜಾಗೃತಿ, ಮಾನವೀಯತೆ ಮತ್ತು ಹೊಣೆಗಾರಿಕೆ ರೂಪಿಸುತ್ತವೆ. ರಾಜಕೀಯಕ್ಕಿಂತ ಮಾನವೀಯತೆ ದೊಡ್ಡದು. ಪ್ರಚಾರಕ್ಕಿಂತ ಸತ್ಯ ದೊಡ್ಡದು. ಭಯಕ್ಕಿಂತ ಧ್ವನಿ ದೊಡ್ಡದುʼ ಎಂದಿದ್ದಾರೆ ನಟ ಯುವ ರಾಜ್‌ಕುಮಾರ್.






