ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಆಗಸ್ಟ್ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಬದಲಾವಣೆ ಮಾಡಿದೆ. ಈ ಮೊದಲು ಮಧ್ಯಾಹ್ನ 2.30ಕ್ಕೆ ನಿಗದಿಯಾಗಿದ್ದ ಪರೀಕ್ಷೆ ಇದೀಗ ಸಂಜೆ 4 ಗಂಟೆಗೆ ಆರಂಭವಾಗಲಿದೆ ಎಂದು ಪ್ರಾಧಿಕಾರ ಅಧಿಕೃತವಾಗಿ ತಿಳಿಸಿದೆ.ರಾಜ್ಯದ ವಿವಿಧ ಭಾಗಗಳ ಅಭ್ಯರ್ಥಿಗಳಿಗೆ ಒಂದೇ ದಿನ ಬೆಳಿಗ್ಗೆ ಒಂದು ಪರೀಕ್ಷಾ ಕೇಂದ್ರ ಹಾಗೂ ಮಧ್ಯಾಹ್ನ ಮತ್ತೊಂದು ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೆಲ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ನಡುವೆ ಹೆಚ್ಚಿನ ಅಂತರವಿರುವುದರಿಂದ ನಿಗದಿತ ಸಮಯಕ್ಕೆ ತಲುಪಲು ತೊಂದರೆಯಾಗುತ್ತಿದೆ ಎಂಬ ಮನವಿಯನ್ನು ಪರಿಗಣಿಸಿ ಪರೀಕ್ಷೆಯ ಸಮಯವನ್ನು ಬದಲಿಸಲಾಗಿದೆ.ಬೆಳಗಿನ ಪರೀಕ್ಷೆ ಮುಗಿದ ಬಳಿಕ ದೂರದ ಪರೀಕ್ಷಾ ಕೇಂದ್ರಗಳಿಗೆ ಸುರಕ್ಷಿತವಾಗಿ ಹಾಗೂ ಸಮಯಕ್ಕೆ ಸರಿಯಾಗಿ ತಲುಪಲು ಅಭ್ಯರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಮಧ್ಯಾಹ್ನದ ಪರೀಕ್ಷೆಯನ್ನು ಒಂದೂವರೆ ಗಂಟೆ ತಡವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.

ಆದರೆ, ಬೆಳಿಗ್ಗೆ ನಡೆಯಲಿರುವ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅವು ಈಗಾಗಲೇ ನಿಗದಿಪಡಿಸಿರುವ ಸಮಯದಲ್ಲೇ ನಡೆಯಲಿದ್ದು, ಅಭ್ಯರ್ಥಿಗಳು ಸೂಚಿಸಿರುವ ವೇಳೆಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಕೆಇಎ ತಿಳಿಸಿದೆ.






