ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕದ ಹೆಮ್ಮೆಯ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಆರಂಭಿಸುತ್ತಿರುವ ಸುಸಜ್ಜಿತ ಕಲಾಲೋಕ ಮಳಿಗೆಯನ್ನು ನವೆಂಬರ್ ಎರಡನೇ ವಾರದಲ್ಲಿ ಉದ್ಘಾಟಿಸಲಾಗುವುದು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರನ್ನೂ ಆಹ್ವಾನಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಈ ಸಂಬಂಧವಾಗಿ ಅವರು ಮಂಗಳವಾರ ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಅವರೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಸಿದ್ಧತೆ ಬಗ್ಗೆ ಚರ್ಚಿಸಿದರು.

ಕಲಾಲೋಕ ಮಳಿಗೆಯು ಮುಖ್ಯವಾಗಿ ದೇಶ/ವಿದೇಶಿ ಗ್ರಾಹಕರನ್ನು ಆದ್ಯತೆಯಾಗಿ ಇಟ್ಟುಕೊಂಡಿದೆ. ಕರ್ನಾಟಕದಲ್ಲಿ ಜಿ.ಐ. ಮಾನ್ಯತೆ ಹೊಂದಿರುವ 40ಕ್ಕೂ ಹೆಚ್ಚು ಉತ್ಪನ್ನಗಳಿವೆ. ಮೈಸೂರು ಸಿಲ್ಕ್, ಚನ್ನಪಟ್ಟಣದ ಬೊಂಬೆ, ಬಂಜಾರ ಉತ್ಪನ್ನಗಳು, ಇಳಕಲ್ ಸೀರೆ, ಕಾಫಿ, ಲಿಡ್ಕರ್ ಉತ್ಪನ್ನಗಳು, ಮೈಸೂರು ಸ್ಯಾಂಡಲ್ ಸೋಪ್ ತರಹದ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ಇವೆಲ್ಲವೂ ಕಲಾಲೋಕ ಮಳಿಗೆಯಲ್ಲಿ ಸಿಗುವಂತೆ ಮಾಡಲಾಗುವುದು. ಈ ಮೂಲಕ ಕರ್ನಾಟಕದ ಅಸ್ಮಿತೆ ಮತ್ತು ಪರಂಪರೆಗೆ ವ್ಯಾಪಕ ಮನ್ನಣೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಕರ್ನಾಟಕದ ವಿಶಿಷ್ಟ ಉತ್ಪನ್ನಗಳ ಬ್ರ್ಯಾಂಡಿಂಗ್ ಮಾಡುವುದು ಸರಕಾರದ ಆಶಯವಾಗಿದೆ. ಇದಕ್ಕೆ ತಕ್ಕಂತೆ ಗ್ರಾಹಕರಿಗೆ ಗಿಫ್ಟ್ ಬಾಕ್ಸ್ ಇತ್ಯಾದಿಗಳು ಸಿಗುವಂತೆ ಮಾಡಲಾಗುವುದು. ಜೊತೆಗೆ ಕಲಾಲೋಕ ಮಳಿಗೆಗೆ ತಾರಾವರ್ಚಸ್ಸಿನ ವ್ಯಕ್ತಿಗಳನ್ನು ಆಮಂತ್ರಿಸಲಾಗುವುದು. ಈ ಮೂಲಕ ವ್ಯವಸ್ಥಿತ ಪ್ರಚಾರ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ಅವರು ವಿವರಿಸಿದ್ದಾರೆ.








