ಬೆಂಗಳೂರು : ನಾನು ನೂರಕ್ಕೆ ನೂರರಷ್ಟು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನಗೇನೂ ಕ್ಯಾನ್ಸರ್ ಆಗಿಲ್ಲ, ನಾನು ದೈಹಿಕವಾಗಿ ಸದೃಢವಾಗಿದ್ದೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿ, ತಮ್ಮ ಆರೋಗ್ಯದ ಕುರಿತು ಎದ್ದಿರುವ ಊಹಾಪೋಹಗಳನ್ನು ಅಲ್ಲಗಳೆದಿದ್ದಾರೆ. ಕೇವಲ ನನಗೆ ಕಾಲು ನೋವಿನ ಸಮಸ್ಯೆಯಷ್ಟೇ ಇದೆ. ಅದನ್ನೂ ಸಹ ನಿವಾರಿಸಿಕೊಂಡು ಮುಂಬರುವ ಚುನಾವಣೆಗೆ ಸ್ಪರ್ಧೆಮಾಡುತ್ತೇನೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಆಸ್ಪತ್ರೆಗಳು ಬಂದ್: ವೈದ್ಯರ ಅನಿರ್ದಿಷ್ಟ ಮುಷ್ಕರ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಚುನಾವಣೆಗೆ ನಿಲ್ಲಬಹುದು. ಈಗಾಗಲೇ ಕೆಲವರು ನಾನು ಮುಂದಿನ ಶಾಸಕ ಅಂತ ಪ್ರಚಾರ ನಡೆಸುತ್ತಿದ್ದಾರೆ. ಆದರೆ 2028ರಲ್ಲಿ ಕಾಗವಾಡ ಕ್ಷೇತ್ರದಿಂದ ಅಭ್ಯರ್ಥಿಯಾಗಿ ನಾನು ಚುನಾವಣಾ ಅಖಾಡಕ್ಕೆ ಧುಮುಕುವುದು ಶತಸಿದ್ಧ ಎಂದು ಪರೋಕ್ಷವಾಗಿ ರಾಜು ಕಾಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಇನ್ನೂ ಈ ಕಾಗವಾಡ ಕ್ಷೇತ್ರದಲ್ಲಿ ಮುಂದಿನ ಶಾಸಕ, ಅಥಣಿ ಎಂಎಲ್‌ಎ ಪುತ್ರ ಚಿದಾನಂದ ಸವದಿ ಆಯ್ಕೆಯಾಗುತ್ತಾರೆ ಎಂದು ಸವದಿ ಬೆಂಬಲಿಗರು ಗೊಂದಲ ಸೃಷ್ಟಿಸುತ್ತಿದ್ದಾರೆ. ಅಲ್ಲದೆ ಸವದಿ ಬೆಂಬಲಿಗರ ನಡೆಗೆ ರಾಜು ಕಾಗೆ ಅಭಿಮಾನಿಗಳು ಪಂಚಮಸಾಲಿ ಲಿಂಗಾಯತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈಗಾಗಲೇ ಶಾಸಕರು ಜನಪರ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹೀಗಿರುವಾಗ ಇಲ್ಲಸಲ್ಲದ ಗೊಂದಲಗಳನ್ನು ನಿರ್ಮಾಣ ಮಾಡುವುದನ್ನು ನಾವು ಸಹಿಸೋದಿಲ್ಲ ಎಂದು ಎಚ್ಚರಿಸಿದ್ದಾರೆ.






