ಬೆಳಗಾವಿ: ಇದು ಮುಸ್ಲಿಂ ಲೀಗ್ ಬಜೆಟ್. ಜಿನ್ನಾ ಆತ್ಮವೇ ಸಿದ್ದರಾಮಯ್ಯ ಅವರಿಗೆ ಪ್ರಚೋದನೆ ಕೊಟ್ಟಿರಬಹುದು ಎಂದು ರಾಜ್ಯ ಬಜೆಟ್ ಬಗ್ಗೆ ಎಂಎಲ್‌ಸಿ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು 16ನೇ ದಾಖಲೆ ಬಜೆಟ್ ಮಂಡಿಸಿದ್ದಾರೆ. ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈವರೆಗಿನ ಸಿಎಂ ಮಾಡಿದ ಸಾಲಕ್ಕಿಂತಲೂ ಹೆಚ್ಚಿನ ಸಾಲ ಮಾಡಿದ್ದಾರೆ. 4 ಲಕ್ಷ ಕೋಟಿ ಅಷ್ಟು ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿ ಸಾಲ 1.27 ಲಕ್ಷ ಕೋಟಿ. ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ಕೊಟ್ಟಿದ್ದರೆ ತೆರಿಗೆ ಸಂಗ್ರಹ ಆಗ್ತಿತ್ತು. ಕಳೆದ ವರ್ಷ 3.22 ಲಕ್ಷ ಕೋಟಿ ಖರ್ಚು ಮಾಡ್ತೇವಿ ಅಂತಾ ಹೇಳಿದ್ರು. ಇದುವರೆಗೂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಶೇ.55 ರಷ್ಟು ಖರ್ಚು ಮಾಡಿದ್ದಾರೆ. ಇನ್ನುಳಿದ 45 ದಿನದಲ್ಲಿ ಉಳಿದ 45 ರಷ್ಟು ಖರ್ಚು ಮಾಡಲು ಸಾಧ್ಯವಾಯ್ತು ಎಂದು ಬೇಸರ ಹೊರಹಾಕಿದ್ದಾರೆ.

ಸರ್ಕಾರದ ಎಲ್ಲದರ ಮೇಲೂ ತೆರಿಗೆ ಹೆಚ್ಚಳ ಮಾಡಿದೆ. ನೀರು, ವಿದ್ಯುತ್, ಪ್ರಾಪರ್ಟಿ, ಬಿತ್ತನೆ, ಬೀಯರ್, ಹಾಲು, ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನುವುದು ಚಾರುವಾಕನ ನೀತಿ ಆಗಿತ್ತು. ನಾನು ಸಿಎಂ ಕೇಳ್ತೀನಿ, ನೀವು ಸಾಲ ಮಾಡಿದ್ದೀರಿ. ತುಪ್ಪ ಯಾರು ತಿನ್ನುತ್ತಿದ್ದಾರೆ? ಜನರ ಮೇಲೆ ಸಾಲ ಹೊರಿಸಿದೀರಿ. ನಿಮ್ಮ ಸರ್ಕಾರದಲ್ಲಿ ತುಪ್ಪ ತಿಂತಿರೋರು ಯಾರು ಎಂದು ಪ್ರಶ್ನಿಸಿದ್ದಾರೆ.