ತನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಕಾರಣ ಎಂದು ಸ್ಪಷ್ಟವಾಗಿ ತಿಳಿಸುವ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲ್ ಹಿಂದೂ ಪರ ಸಂಘಟನೆಯ ಪದಾಧಿಕಾರಿ. ಬಿಜೆಪಿ ಜೊತೆಗೆ ಬಹಳ ಒಳ್ಳೆಯ ಸಂಬಂಧ ಹೊಂದಿದ ವ್ಯಕ್ತಿ. ಯಡಿಯೂರಪ್ಪ ಅವರನ್ನು ‘ನಮ್ಮ ಹಿರಿಯ ಲಿಂಗಾಯತ ನಾಯಕ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅಪ್ಪಟ ಅಭಿಮಾನಿ. ಈಶ್ವರಪ್ಪ ಅವರ ಮೇಲೆ ನಂಬಿಕೆ ಇಟ್ಟು ಬಡ್ಡಿಗೆ ದುಡ್ಡು ತಂದು ಕೆಲಸ ಮಾಡಿದ ಗುತ್ತಿಗೆದಾರ. ಆರ್ ಎಸ್ಎಸ್ ಮತ್ತು ಬಿಜೆಪಿಗೆ ತನ್ನದೇಯಾದ ಕೊಡುಗೆ ಕೊಟ್ಟಿರುವ ಕಟ್ಟಾಳು. ಇಂಥ ಕಾರ್ಯಕರ್ತ, ಅನುಯಾಯಿಯನ್ನು ‘ಬಲಿ ಪಡೆದ’ ಕೆ.ಎಸ್. ಈಶ್ವರಪ್ಪ ಅವರನ್ನು ಇಷ್ಟೆಲ್ಲಾ ಆದ ಮೇಲೂ ಆರ್ ಎಸ್ಎಸ್ ರಕ್ಷಣೆ ಮಾಡುತ್ತಾ?
ಸಂತೋಷ್ ಪಾಟೀಲ್ ಅವರಂತೆ ಈಶ್ವರಪ್ಪ ಬಗ್ಗೆಯೂ ನೋಡುವುದಾದರೆ ‘ಹರಕುಬಾಯಿ ಈಶ್ವರಪ್ಪ’ ಎಂದೇ ಹೆಸರಾದವರು. ಮಾಧ್ಯಮದವರಿಗೆ ‘ಬೆಡ್ ರೂಂಗೂ ಬಂದು ಬಿಡಿ’ ಎಂದು ಕರೆದಿದ್ದವರು. ಮನೆಯಲ್ಲೇ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿರುವವರು. ‘ಕೆಂಪುಕೋಟೆಯಲ್ಲಿ ಮುಂದೊಂದು ದಿನ ಕೇಸರಿ ಭಾವುಟ’ ಹಾರಬಹುದೆಂದು ಹೇಳಿದವರು. ಸದಾ ವಿವಾದ ಸೃಷ್ಟಿಸುವ, ಕೋಮು ವಿಷ ಹರಡುವ, ಅಧಿಕಾರಕ್ಕಾಗಿ ಹಪಹಪಿಸುವ, ‘3 ಕೊಟ್ಟರೆ ಯಡಿಯೂರಪ್ಪ ಕಡೆ, 6 ಕೊಟ್ಟರೆ ಅನಂತಕುಮಾರ್ ಕಡೆ’ ಎಂದು ಪಥ ಬದಲಿಸಿದ ನಿಷ್ಠಾವಂತ. ಯಡಿಯೂರಪ್ಪ ಅವರ ವಿರುದ್ಧ ಯಾರನ್ನೋ ‘ಸಂತೋಷ’ ಪಡಿಸಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿ, ಕಡೆಗೆ ಅಧಿಕಾರ ಸಿಗುತ್ತಿದ್ದಂತೆ ತಾವೇ ಬ್ರಿಗೇಡ್ ಅನ್ನು ಬೀದಿಗೆಸೆದವರು. ಹೀಗೆ ಹೇಳುತ್ತಾ ಹೋದರೆ ಅವರ ಸಾಹಸಗಾಥೆಗಳು ಬಹಳ. ಇಂಥ ಈಶ್ವರಪ್ಪ ಅವರನ್ನು ಇಷ್ಟೆಲ್ಲಾ ಆದ ಮೇಲೂ ಆರ್ ಎಸ್ಎಸ್ ರಕ್ಷಣೆ ಮಾಡುತ್ತಾ?
ಪ್ರಶ್ನೆ ಬಹಳ ಸರಳವಾಗಿದೆ. ಉತ್ತರ ಹುಡುಕುವುದು ಕಠಿಣ. ರಕ್ಷಣೆ ಮಾಡುತ್ತೆ ಅಥವಾ ಮಾಡಲ್ಲ ಅಂತಾ ಯಾವ ಉತ್ತರ ಹೇಳಿದರೂ ಅದು ತಪ್ಪೂ ಆಗಬಹುದು, ಸರಿಯೂ ಆಗಬಹುದು. ರಾಜ್ಯದ ಬಿಜೆಪಿ ನಾಯಕರೊಬ್ಬರ ಪ್ರಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಉತ್ತರ ಗೊತ್ತಿಲ್ಲ. ‘ಈಶ್ವರಪ್ಪ ಅವರನ್ನು ಈಗ ಸಚಿವ ಸಂಪುಟದಲ್ಲಿ ಮುಂದುವರೆಸುವ ಅಥವಾ ಮನೆಗೆ ಕಳುಹಿಸುವ ನಿರ್ಧಾರ ಮಾಡಬೇಕಾಗಿರುವುದು ಬಿಜೆಪಿ ಅಲ್ಲವೇ ಅಲ್ಲ, ಅದೇನಿದ್ದರೂ ಆರ್ ಎಸ್ಎಸ್ ಕೆಲಸ’ ಎನ್ನುತ್ತಾರೆ ಇನ್ನೊಬ್ಬ ನಾಯಕರು.
ಮೇಲೆ ಹೇಳಿದ ಈಶ್ವರಪ್ಪ ಅವರ ಗುಣವಿಶೇಷಗಳು ಇಂದು-ನಿನ್ನೆಯವಲ್ಲ. ಮೊದಲಿನಿಂದಲೂ ಹಾಗೇ ಇದ್ದರೂ. ಆದರೂ ಅವರನ್ನು ಆರ್ ಎಸ್ಎಸ್ ಪೊರೆಯುತ್ತಲೇ ಬಂದಿದೆ. ಒಮ್ಮೊಮ್ಮೆ ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಿ. ಕೆಲವೊಮ್ಮೆ ಅನಂತಕುಮಾರ್ ವಿರುದ್ಧ ಎತ್ತಿಕಟ್ಟಿ. ಅನಂತಕುಮಾರ್ ವಿರುದ್ಧ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಬಿ.ಎಲ್. ಸಂತೋಷ್ ಅವರ ಕಾರ್ಯತಂತ್ರ. ಹೀಗೆ ಆರ್ ಎಸ್ಎಸ್ ಮುದ್ದಾಡಿ ಬೆಳಸಿದ ಮಗು ಈಶ್ವರಪ್ಪ ಕಳೆದ ಬಾರಿ ಸಚಿವ ಸಂಪುಟ ರಚನೆ ಸಂದರ್ಭದಲ್ಲೇ ಸ್ಥಾನ ಕಳೆದುಕೊಳ್ಳಬೇಕಿತ್ತು. ಕಲ್ಲಡಕ ಪ್ರಭಾಕರ ಭಟ್ಟ ಮತ್ತಿತರ ಆಶೀರ್ವಾದದಿಂದ ಸಚಿವರಾದರು. ಈಗಲೂ ಮತ್ತೆ ಅಂಥದೇ ಆಶೀರ್ವಾದ ಸಿಗುವುದಿಲ್ಲ ಎನ್ನುವುದಕ್ಕೆ ಖಾತರಿ ಇಲ್ಲ. ಅದರಲ್ಲೂ ಇತ್ತೀಚಿಗೆ ಹರ್ಷ ಕೊಲೆ ಪ್ರಕರಣದಿಂದ ಕೆಂಪು ಕೋಟೆಯಲ್ಲಿ ಕೇಸರಿ ಭಾವುಟ ಹಾರಿಸುವ ವಿಷಯದವರೆಗೆ ಕೋಮು ದಳ್ಳುರಿ ಎಬ್ಬಿಸಿರುವ ಪ್ರೀತಿಪಾತ್ರ ಈಶ್ವರಪ್ಪ ಅವರನ್ನು ಮತ್ತೆ ಆಶೀರ್ವದಿಸುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಈಶ್ವರಪ್ಪ ಅವರನ್ನು ಸಂಪುಟದಿಂದ ಕಿತ್ತುಹಾಕಬೇಕು, ಅವರ ವಿರುದ್ಧ ಕೊಲೆಯ ಆರೋಪ ಹೊರಿಸಿ ದೂರು ದಾಖಲಿಸಬೇಕು, ಬಂಧಿಸಬೇಕು ಎಂದು ಕಾಂಗ್ರೆಸ್ ಒತ್ತಡ ಹೇರುತ್ತಿದೆ. ಇತ್ತೀಚೆಗೆ ಕೋಮು ರಾಜಕಾರಣದಲ್ಲಿ ಕಂಗಲಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ರಾಜ್ಯ ಸರ್ಕಾರದ ವಿರುದ್ಧ ಹೋರಾಡಲು ಪ್ರಮುಖ ಅಸ್ತ್ರ ಸಿಕ್ಕಂತಾಗಿದೆ. ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುವುದು ತಡವಾದಷ್ಟೂ ಪ್ರತಿಪಕ್ಷಗಳ ಬತ್ತಳಿಕೆಯಲ್ಲಿರುವ ಅಸ್ತ್ರ ಮೊನಚಾಗುತ್ತಾ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ಪಡೆದುಕೊಳ್ಳಲೂ ಬಹುದು.
ಮೌನಿ ಬಸವರಾಜ
ರಾಜ್ಯದಲ್ಲಿ ಕೋಮು ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಮೌನವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಈಗ ಈಶ್ವರಪ್ಪ ವಿಷಯ ಆದಷ್ಟು ಬೇಗ ಕೊನೆಯಾಗಬೇಕಿದೆ. ಈಶ್ವರಪ್ಪ ರಾಜೀನಾಮೆ ಪ್ರಹಸನ ಹಿಗ್ಗಿದಷ್ಟೂ ತಮ್ಮ ಸರ್ಕಾರದ ವಿರುದ್ಧ ಜನಾಭಿಪ್ರಾಯ ಹೆಚ್ಚಾಗುತ್ತದೆ. ಆ ಸಂಗತಿ ಹೈಕಮಾಂಡ್ ನಾಯಕರಿಗೆ ಮುಟ್ಟಿದಾಗ ಅದು ತಮ್ಮ ಬುಡಕ್ಕೆ ಬರಬಹುದು ಎಂಬುದು ಬಸವರಾಜ ಬೊಮ್ಮಾಯಿ ಚಿಂತೆ. ಅವರೀಗ ‘ಬೇಗ ಏನಾದರೂ ಆಗಿಬಿಡಲಿ’ ಎಂದು ಆರ್ ಎಸ್ಎಸ್ ಹಾಗೂ ದಿಲ್ಲಿ ನಾಯಕರ ನಿರ್ಧಾರಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ.