ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ರಾಜ್ಯದ ಸಮಸ್ಯೆಗಳು, ಅದರ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲು ಅಧಿವೇಶನ(session )ನಡೆಸುತ್ತ ಬಂದಿದೆ. ಅದರಂತೆ ಪ್ರಮುಖವಾಗಿ ಅಖಂಡ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕುಂದು ಕೊರತೆ, ಮೂಲಭೂತ ಸೌಕರ್ಯಗಳ, ರೈತರು, ಕಾರ್ಮಿಕರು, ಯುವಕರು, ಮಹಿಳೆಯರ ಸಾಕಷ್ಟು ಸಮಸ್ಯೆಗಳಿವೆ. ಆದರೆ ಇದುವರೆಗೂ ಪರಿಹಾರವಾಗದಿರುವುದು ದುರಂತ.

ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ( Belagavi session) ನಡೆಯುತ್ತಿದೆ. ಈ ಬಾರಿಯೂ ರಾಜ್ಯದ ಜನರು ಅಧಿವೇಶನದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಮ್ಮ ಸಮಸ್ಯೆಗಳಿಗೆ ಈಗಲಾದರೂ ಒಂದು ಪರಿಹಾರ ದೊರೆಯಬಹುದಾ ಎಂಬ ಆಶಾಭಾವದಲ್ಲಿದ್ದಾರೆ. ಆದರೆ ಈ ಬಗ್ಗೆ ಜನರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸಬೇಕಿದ್ದ ಜನಪ್ರತಿನಿಧಿಗಳು ಮೌನಕ್ಕೆ ಶರಣಾದಂತೆ ಕಂಡು ಬರುತ್ತಿದೆ. ವಿಧಾನಸಭೆಯಾಗಲಿ ಅಥವಾ ಪರಿಷತ್ತಾಗಲಿ ಜನರ ಭಾವನೆಗಳನ್ನು ಮನ್ನಿಸಿ, ಜನಸಾಮಾನ್ಯರ ಪ್ರಶ್ನೆಗಳಿಗೆ ಪರಿಹಾರ ನೀಡಿ, ಅವುಗಳನ್ನು ಗೌರವಿಸುವ ಕೇಂದ್ರಗಳಾಗಬೇಕೇ ಹೊರತು, ಶಾಸಕರು, ಮಂತ್ರಿಗಳಿಗೆ ಕಾಲ ಹರಣ ಮಾಡುವ ವಿಶ್ರಾಂತಿ ಸ್ಥಳಗಳಾಗಬಾರದು.

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಅಧಿವೇಶನದಲ್ಲಿ ಶಾಸಕರು ಚರ್ಚೆಯಲ್ಲಿ ಪಾಲ್ಗೊಳ್ಳಲು ಮುಂದಾಗುತ್ತಿಲ್ಲವಾ? ಹೀಗೊಂದು ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುತ್ತಿದೆ. ವಿಧಾನ ಪರಿಷತ್‌ನಲ್ಲಿ ಸಾಕಷ್ಟು ಹಿರಿಯ ರಾಜಕಾರಣಿಗಳು ಇರುತ್ತಾರೆ. ಅದರಲ್ಲಿ ಸಾಕಷ್ಟು ಸಮಸ್ಯೆಗಳು ಗಂಭೀರವಾಗಿ ಚರ್ಚೆಯಾಗಬೇಕು. ಅಲ್ಲದೇ ಅವುಗಳನ್ನು ಪರಿಹರಿಸುವ ಮಾರ್ಗೋಪಾಯಗಳ ಬಗ್ಗೆಯೂ ಗಮನ ಹರಿಸಬೇಕು. ಆದರೆ ಈ ಬಾರಿಯ ಸದನಕ್ಕೆ ಪರಿಷತ್ ಸದಸ್ಯರ ಹಾಜರಾತಿ ಕೊರತೆ ಎದ್ದು ಕಾಣುತ್ತಿದೆ. ಪ್ರಮುಖವಾಗಿ ವಿಧಾನಪರಿಷತ್ ಕೂಡ ಶಾಸನಗಳ ರಚನೆ ಅವುಗಳ ಕಾರ್ಯರೂಪಕ್ಕೆ ತರುವಲ್ಲಿ ಪಾತ್ರ ವಹಿಸುತ್ತದೆ.

ವಿಧಾನಸಭೆಯ ಸದಸ್ಯರಷ್ಟೇ ಅವರಿಗೂ ಅಭಿವೃದ್ದಿಯ ದೃಷ್ಟಿಕೋನ, ಸುಧಾರಣೆಯ ತುಡಿತ ಹಾಗೂ ಚರ್ಚೆಯ ಉತ್ಸುಕತೆ ಇರಬೇಕು. ಆದರೆ ಬಹುತೇಕ ಸದಸ್ಯರಲ್ಲಿ ಅದರ ಕೊರತೆಯು ಕಂಡು ಬರುತ್ತಿದೆ. ಬೆರಳೆಣಿಕೆಯಷ್ಟೇ ಜನರು ಭಾಗವಹಿಸಿ ಚರ್ಚೆ ಮಾಡಿದರೆ ಅದರಿಂದ ಏನು ಪ್ರಯೋಜನ? ಇರುವ 75 ಜನರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಹಾಜರಾಗಬೇಕು. ಅಂದಾಗ ಮಾತ್ರ ರಾಜ್ಯದ ಹಲವು ಸಮಸ್ಯೆಗಳಿಗೆ ಮುಕ್ತಿ ಹಾಡಲು ಸಾಧ್ಯವಾಗಬಹುದು. ಆದರೆ ಜನರ ತೆರಿಗೆ ಹಣದಲ್ಲಿ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಕೇವಲ ಶಾಸಕರು, ಸಚಿವರ ಮೋಜು, ಮಸ್ತಿಗೆ ಸೀಮಿತವಾದರೆ ಏನು ಲಾಭ..? ಸದನಕ್ಕೆ ಹಾಜರಾಗದೇ ಕಾಲ ಹರಣ ಮಾಡುವ ಜನಪ್ರತಿನಿಧಿಗಳು ತಮ್ಮನ್ನು ಆಯ್ಕೆ ಮಾಡಿದ ಜನರ ಏಳ್ಗೆಯನ್ನು, ಜನರ ಬದುಕಲ್ಲಿ ಬದಲಾವಣೆ ಹೇಗೆ ತರುತ್ತಾರೆ ಎನ್ನುವುದು ಕೂಡು ದೊಡ್ಡ ಪ್ರಶ್ನೆಯಾಗಿದೆ.

ಕಳೆದ ಬಾರಿ 15 ಕೋಟಿ ವೆಚ್ಚದಲ್ಲಿ ನಡೆದಿದ್ದ ಬೆಳಗಾವಿ ಅಧಿವೇಶನಕ್ಕೆ, ಈ ಸಲ 20 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದೆ. ಹೀಗಿರುವಾಗ ರಾಜ್ಯದ ಅಭಿವೃದ್ದಿಯ ಬಗ್ಗೆ ಚರ್ಚಿಸಿ ಪರಿಹಾರ ನೀಡದಿದ್ದರೆ ಎಲ್ಲವೂ ನೀರಲ್ಲಿ ಹೋಮ ಮಾಡಿದಂತಾಗುತ್ತದೆ. ಇನ್ನುಳಿದ ಬಾಕಿ ದಿನಗಳಲ್ಲಾದರೂ ವಿಧಾನಸಭೆ ಹಾಗೂ ಪರಿಷತ್ ಸದಸ್ಯರು ಎರಡೂ ಸದನಗಳಲ್ಲಿ ಗಂಭೀರ, ಗಹನವಾದ ಚರ್ಚೆ ನಡೆಸಬೇಕು. ಅಲ್ಲದೇ ಸಾಧ್ಯವಾದಷ್ಟು ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮಹತ್ವದ ನಿರ್ಧಾರಗಳಿಗೆ ಈ ಅಧಿವೇಶನ ಸಾಕ್ಷಿಯಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.












