ಕರ್ನಾಟಕದ (karnataka) ರಾಜಕಾರಣ ಕಳೆದ 3-4 ದಶಕಗಳಿಂದ ವಿವಿಧ ರೀತಿಯ ರಾಜಕೀಯ (politics) ಬೆಳವಣಿಗೆಗೆ ಸಾಕ್ಷಿಯಾಗಿದೆ. ಅದರಲ್ಲೂ ರಾಜ್ಯ ರಾಜಕಾರಣ ವಿವಿಧ ಕಾರಣಗಳಿಂದ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದು ಕೂಡ ಇದೆ. ಇದಕ್ಕೆ ನಾನಾ ಕಾರಣಗಳಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ಪ್ರಮುಖ ಸಮುದಾಯದ ನಾಯಕರ ವರ್ಷಸ್ಸು ಕೂಡ ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ . ಕಳೆದ 5 ದಶಕಗಳಲ್ಲಿ ಕರ್ನಾಟಕ ನಾನಾ ಸಮುದಾಯಗಳಿಂದ ಬಂದ, ಹಲವು ಪ್ರಬಲ ನಾಯಕರನ್ನ ನೋಡಿದೆ. ಆದ್ರೆ ಕಳೆದ 2 ದಶಕಗಳ ಈಚೆಗೆ ಬಂದ ನಾಯಕರುಗಳು, ಸಮುದಾಯದ ಹೆಸರನ್ನ ಬಳಸಿಕೊಂಡು ಬಣದ ರಾಜಕಾರಣಗಳಿಗೆ ಸಾಕ್ಷಿಯಾಗುತ್ತಿದ್ದಾರೆ.
ಈ ಬಣ ಹಾಗೂ ಜಾತಿ (cast politics) ರಾಜಕಾರಣ ಅನ್ನೋದು ರಾಜಕೀಯ ಪಕ್ಷಗಳ ಬೆನ್ನ ಹಿಂದೆ ಬಿದ್ದ ನೆರಳಿನ ಹಾಗಾಗಿದೆ. ಇದು ರಾಜಕೀಯ ಪಕ್ಷಗಳಿಗೆ (Political party) ಶಾಪವೋ, ವರವೋ ಅನ್ನೋದು ಮಾತ್ರ ಇದುವರೆಗೂ ಬಗೆಹರಿಯದ ಪ್ರಶ್ನೆ. ಆದ್ರೆ ಮೇಲ್ನೋಟವಾಗಿ ಇದರಿಂದ ಸಾಕಷ್ಟು ಜನ ನಾಯಕರಿಗೆ ಲಾಭವಾಗಿದ್ದರೆ, ಇನ್ನೂ ಕೆಲ ರಾಜಕೀಯ ನಾಯಕರು (political leaders) ಇದರಿಂದ ವಿವಾದಕ್ಕೆ ಕೂಡ ಸಿಲುಕಿಕೊಂಡಿರುವ ಉದಾಹರಣೆಗಳಿವೆ. ಆದ್ರೆ ಈ ಬಣ ಮತ್ತು ಜಾತಿ ರಾಜಕಾರಣ ಅನ್ನೋದು ಸದ್ಯದ ಮಟ್ಟಿಗೆ ದೇಶವನ್ನ ಬಿಟ್ಟು ಹೋಗೋದಿಲ್ಲ ಅನ್ನೋದು ಮಾತ್ರ ಖಚಿತವಾಗಿದೆ.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ (bjp) ಅಧಿಕಾರದಲ್ಲಿದ್ದಾಗ ಕೂಡ ಈ ರೀತಿಯಾದ ಜಾತಿ ಹಾಗು ಬಣದ ರಾಜಕಾರಣದ ಆರೋಪಗಳು ಕೇಳಿ ಬಂದಿದ್ದವು, ಬಿಜೆಪಿಯ ನಾಯಕರು ಕೋಮುವಾದಕ್ಕೆ ಹೆಚ್ಚಿನ ಆದ್ಯತೆಯನ್ನ ನೀಡುತ್ತಾರೆ. ಜೊತೆಗೆ ಒಂದು ಕೋಮಿನ ಪರವಾಗಿ ಮಾತ್ರ ಕೆಲಸವನ್ನ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನ ಮಾಡಲಾಗಿತ್ತು. ಆದ್ರೆ ಇದು ಬಿಜೆಪಿಗೆ ಸರ್ವೇ ಸಾಧಾರಣವಾಗಿತ್ತು. ಇದನ್ನ ಹೊರತು ಪಡಿಸಿ ಬಜೆಪಿಗೆ ಅತಿದೊಡ್ಡ ಆಘಾತ ನೀಡಿದ್ದು ಅಂದ್ರೆ ಅದು ಬ್ರಾಹ್ಮಣ ಮುಖ್ಯಮಂತ್ರಿ ವಿವಾದ..
ಹೌದು.. ಅದರಲ್ಲೂ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿ ಸರ್ಕಾರ ಬ್ರಾಹ್ಮಣರಿಗೆ ಮಾತ್ರ ಆದ್ಯತೆಯನ್ನ ನೀಡುತ್ತಿದೆ. ಮುಂದೆ ರಾಜ್ಯದಲ್ಲಿ ಬ್ರಾಹ್ಮಣ ಮುಖ್ಯಮಂತ್ರಿ ವಿಚಾರವಾಗಿ ಪ್ರಹ್ಲಾದ್ ಜೋಷಿಯವರಿಗೆ (Prahlad joshi) ಬಿಜೆಪಿ ಹೆಚ್ಚು ಆದ್ಯತೆಯನ್ನ ನೀಡಲಿದೆ ಅಂತ ಅಂದು ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಯನ್ನ ನೀಡಿದ್ದರು, ಇದು ಅಂದಿನ ಬಿಜೆಪಿ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿ ಬಿಡ್ತು.. ಇದಾದ ಬಳಿಕ ಒಂದಷ್ಟು ಹೇಳಿಕೆಯನ್ನ ನೀಡಿ ಬಿಜೆಪಿ ನಾಯಕರು ಬ್ರಾಹ್ಮನ ಸಿಎಂ ವಿಚಾರವನ್ನ ತಣ್ಣಗಾಗಿಸಿದ್ದರು.

ಇದಾದ ಬಳಿಕ ಮತ್ತೆ ಬಿಜೆಪಿಗೆ ಬಹುದೊಡ್ಡ ಆಘಾತವಾಗಿ ಕಾಡಿದ್ದು ಅಂದ್ರೆ ಲಿಂಗಾಯತರ ಕಡೆಗಣನೆ ವಿಚಾರ. ಅದ್ರಲ್ಲೂ ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಬಂಡೆದ್ದು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರಿದ್ದರು, ಇದು ಬಿಜೆಪಿಗೆ ಬಹುದೊಡ್ಡ ಆಘಾತವನ್ನ ತಂದೊಡ್ಡಿತ್ತು. ಜೊತೆಗೆ ಲಿಂಗಾಯಿತರನ್ನ ಬಿಜೆಪಿಯಲ್ಲಿ ಕಡೆಗಣನೆ ಮಾಡುತ್ತಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಅವರ ಆರೋಪ ಬಿಜೆಪಿಯ ನಿದ್ದೆ ಕೆಡಿಸಿದ್ದಂತು ಸುಳ್ಳಲ್ಲ. ಇನ್ನು ಬ್ರಾಹ್ಮಣರಿಗೆ ಬಿಜೆಪಿ ಹೆಚ್ಚು ಆದ್ಯತೆಯನ್ನ ನೀಡುತ್ತಿದೆ ಎಂಬ ಆರೋಪ ಕೂಡ ಬಿಜೆಪಿಯ ಮತಗಳನ್ನ ಹಾಳು ಮಾಡುವಲ್ಲಿ ಪರಿಣಾಮ ಬೀರಿತ್ತು.
ಇನ್ನು ಇದು ಬಿಜೆಪಿಯ ಪರಿಸ್ಥಿತಿಯಾದ್ರೆ, ಬಿಜೆಪಿಯ ಜಾತಿ ರಾಜಕಾರಣವನ್ನ ಟೀಕಿಸುತ್ತಾ ಬಂದಿದ್ದ ಕಾಂಗ್ರೆಸ್ ಈಗ ಜಾತಿ ಹಾಗೂ ಬಣದ ರಾಜಕಾರಣಕ್ಕೆ ಕೈ ಹಾಕಿದ್ಯಾ ಅನ್ನೋ ಅನುಮಾನ ಮೂಡಿದೆ., ಅದ್ರಲ್ಲೂ ರಾಜ್ಯದಲ್ಲಿ ದ್ವೇಷ ರಾಜಕಾರಣ ಹಾಗೂ ದುರಾಡಳಿತವನ್ನ ಕೊನೆಗೊಳಿಸಿ, ಸಾಮೂಹಿಕ ನಾಯಕತ್ವದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ ಅಂತ, ಕಾಂಗ್ರೆಸ್‌ನ ನಾಯಕರು ಎದೆಯುಬ್ಬಿಸಿಕೊಂಡು ಹೇಳುತ್ತಿದ್ದಾರೆ. ಆದ್ರೆ ಕಾಂಗ್ರೆಸ್‌ನ ಒಳಗೆ ಜಾತಿ ಹಾಗೂ ಬಣದ ರಾಜಕಾರಣ ನಡೆಯುತ್ತಿದೆಯೇ ಎಂಬ ಅನುಮಾನ ಮೂಡೋದಕ್ಕೆ ಶುರುವಾಗಿದೆ. ಕಾಂಗ್ರೆಸ್‌ನ ವಿರುದ್ಧ ಕೆಲ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳು ಸರ್ಕಾರದ ವಿರುದ್ಧ ಮಾಡುತ್ತಿರುವ ಪರೋಕ್ಷ ಆರೋಪಗಳೇ ಇದಕ್ಕೆ ಸಾಕ್ಷಿಯಾಗಿ ನಿಂತಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್‌ನಲ್ಲಿ ಎರಡು ಬಣಗಳಿವೆ ಅನ್ನೋದು ಜಗತ್‌ಜಾಹೀರಾಗಿದೆ, ಅದರಲ್ಲಿ ಹೆಚ್ಚಿನ ಶಾಸಕರು ಸಿದ್ದರಾಮಯ್ಯ ಅವರ ಪರವಾಗಿ ಇದ್ದಾರೆ. ಕೆಲ ಶಾಸಕರು ಮಾತ್ರ ಡಿ.ಕೆ ಶಿವಕುಮಾರ್ ಅವರ ಬಣದಲ್ಲಿದ್ದಾರೆ ಅನ್ನೋದು ಎಲ್ಲಾರಿಗೂ ಗೊತ್ತಿರುವ ಬಹಿರಂಗ ರಹಸ್ಯ!. ಹೀಗಾಗಿ ಪಕ್ಷದಲ್ಲಿ ಹೆಚ್ಚು ಹಿಡಿತವನ್ನ ಸಿಎಂ ಸಿದ್ದರಾಮಯ್ಯನವರೇ ಹೊಂದಿದ್ದಾರೆ, ಆದರೆ ಪ್ರಮುಖ ವಿಷಯಗಳಲ್ಲಿ ಡಿ.ಕೆ ಶಿವಕುಮಾರ್ ಮಧ್ಯ ಪ್ರವೇಶ ಮಾಡುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಆದ್ರೆ ಇಲ್ಲಿ ಮತ್ತೊಂದು ಪ್ರಮುಖ ವಿಚಾರ ಕೂಡ ಇದೆ ಈಗಾಗ್ಲೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಾಯಕರು ಬೇರೆ ಖಾತೆ ನಿರ್ವಹಿಸುವ ಸಚಿವರ ನಿರ್ಣಯಗಳಿಗೆ ಅಡೆ-ತೆಡೆ ಉಂಟುಮಾಡಬಾರದು ಎಂಬ ನಿರ್ಣಯವನ್ನ ತೆಗೆದುಕೊಳ್ಳಲಾಗಿದೆ. ಆದರೆ ಇದೀಗ ಸಿಎಂ ಹಾಗೂ ಡಿಸಿಎಂ ಈ ವಿಚಾರದಲ್ಲಿ ತಮ್ಮ ತಮ್ಮ ನಿರ್ಧಾರಗಳ ವಿಚಾರದಲ್ಲೇ ವೈಮನಸ್ಸು ಮೂಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಆಡಳಿತರೂಢ ಪಕ್ಷದಲ್ಲಿ ಈಗ ಒಕ್ಕಲಿಗ ವರ್ಸಸ್ ಕುರುಬ ಎಂಬಂತಾಗಿದೆ.

ಇಂತಹದೊಂದು ಮಾತು ಇದೀಗ ಕಾಂಗ್ರೆಸ್ ಪಾಳಾಯದಲ್ಲಿ ಕೇಳಿ ಬಂದಿದೆ, ಒಂದು ಕಡೆಯಲ್ಲಿ ಸಿಎಂ ಸಿದ್ದರಾಮಯ್ಯ ಬಣವನ್ನ ಡಿ.ಕೆ ಶಿವಕುಮಾರ್ ಬಣ ಕಡೆಗಣನೆ ಮಾಡ್ತಾ ಇದೆ ಅಂತ ಆರೋಪಗಳಿವೆ, ಮತ್ತೊಂದು ಕಡೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಬಣವನ್ನ ಸಿಎಂ ಸಿದ್ದರಾಮಯ್ಯ ಬಣ ಕಡೆಗಣನೆ ಮಾಡ್ತಾ ಇದೆ ಅನ್ನೋ ಆರೋಪಗಳು ಇವೆ. ಇದರ ನಡುವೆ ಇದೀಗ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ಕೂಡ ಬಣ ಹಾಗೂ ಜಾತಿ ಲೆಕ್ಕಾಚಾರ ನಡೆದಿದೆ ಅಂತ ಹೇಳಲಾಗುತ್ತಿದೆ.
ಹೌದು.. ಇದೀಗ ಈ ಎರಡೂ ನಾಯಕರ ಬಣಗಳ ಮುಖಂಡರು ಇದೀಗ ಪರೋಕ್ಷವಾಗಿ ಕಿತ್ತಾಟವನ್ನ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಕಿತ್ತಾಟ ಕೇವಲ ರಾಜಕೀಯವಾಗಿ ಮುಂದುವರಿಯದೆ ಇದೀಗ ಆಡಳಿತಾತ್ಮಕವಾಗಿಯೂ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ ಪೂರಕವೆಂಬಂತೆ ಇದೀಗ ಕೆಲ ಅಧಿಕಾರಿಗಳನ್ನು ಜಾತಿ ಆಧಾರದ ಮೇಲೆ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದರ ಜೊತೆಗೆ ಯಾವ ನಾಯಕರಿಗೆ ಯಾವ ಅಧಿಕಾರಿ ಆತ್ಮಿಯರಾಗಿದ್ದಾರೋ ಅವರನ್ನ ಗುರಿಯಾಗಿಸಿ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಗುರುತರವಾದ ಆರೋಪಗಳನ್ನ ಪರೋಕ್ಷವಾಗಿ ಕೆಲ ಅಧಿಕಾರಿಗಳು ಮಾಡುತ್ತಿದ್ದಾರೆ. ಹಾಗಾಗಿ ಈಗಿನ ಇದರ ಜೊತೆಗೆ ತಮ್ಮ ತಮ್ಮ ಸಮುದಾಯದ ನಾಯಕರಿಗೆ ಈ ಇಬ್ಬರು ಮಹಾನಾಯಕರು ಹೆಚ್ಚು ಒತ್ತು ನೀಡುತ್ತಿರುವ ಕಾರಣ ಸರ್ಕಾರದಲ್ಲಿ ಕುರುಬ ವರ್ಸಸ್ ಒಕ್ಕಲಿಗ ಎಂಬ ಪರಿಸ್ಥಿತಿ ಇದೆ ಎಂಬ ಮಾಹಿತಿ ಹೊರಬೀಳಿತ್ತಿವೆ
ಈ ಬಗ್ಗೆ ಕೆಲ ಆದೇಶದ ಪ್ರತಿಗಳು ಕೂಡ ಸರ್ಕಾರದ ಪ್ರಮುಖ ನಾಯಕರು ಬಣದ ಹಾಗೂ ಜಾತಿ ರಾಜಕಾರಣಕ್ಕೆ ಮುಂದಾಗಿದ್ದಾರೆಯೇ ಎಂಬ ಅನುಮಾನ ಹುಟ್ಟಹಾಕದೆ ಇರದು, ಒಟ್ಟಿನಲ್ಲಿ ಇದು ಕಾಂಗ್ರೆಸ್‌ನಲ್ಲಿ ಸಿಎಂ ಹಾಗೂ ಡಿಸಿಎಂ ನಡುವೆ ಪರೋಕ್ಷ ಕಿತ್ತಾಟ ಇರುವುದು ನಿಜವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಕಂಟಕ ತಪ್ಪಿದ್ದಲ್ಲ…