ಹಂಪಿ: ಹಂಪಿ ಉತ್ಸವದ ವೇಳೆ ನಟಿ ರಚಿತಾ ರಾಮ್ (Rachita Ram) ಅವರ ಕಾರು ಚಾಲಕ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಹಂಪಿ ಉತ್ಸವದ ಕೊನೆಯ ದಿನವಾದ ಫೆಬ್ರವರಿ 15ರಂದು ಕಾರ್ಯಕ್ರಮ ಸ್ಥಳದಲ್ಲಿ ಭಾರೀ ಜನಸಂದಣಿ ಕಂಡುಬಂದಿತ್ತು. ಈ ವೇಳೆ ರಚಿತಾ ರಾಮ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಭದ್ರತಾ ನೆಪದಲ್ಲಿ ಅವರ ಕಾರು ಚಾಲಕ ಜನರನ್ನು ದೂರ ಸರಿಸುತ್ತಿದ್ದರು ಎನ್ನಲಾಗಿದೆ. ಆರೋಪದ ಪ್ರಕಾರ, ಚಾಲಕ ರವಿಕುಮಾರ್ ಅವರನ್ನು ಮೊಣಕೈಯಿಂದ ತಳ್ಳಿದ್ದು, ಇದರಿಂದ ಅವರ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಗಾಯಗೊಂಡ ಅಧಿಕಾರಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.

ಘಟನೆಯ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಪೊಲೀಸರು ಅವುಗಳನ್ನು ಪರಿಶೀಲಿಸುತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹಂಪಿ ಉತ್ಸವದಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಭದ್ರತಾ ವ್ಯವಸ್ಥೆ ಮತ್ತು ಜನಸಂದಣಿ ನಿಯಂತ್ರಣ ಕುರಿತು ಮತ್ತೆ ಪ್ರಶ್ನೆಗಳು ಮೂಡಿವೆ.






