ಭಾರತ ಮತ್ತು ಚೀನಾ ನಡುವಿನ ಗಡಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಭಾರತ ಸೇನೆಯ 50,000 ಸೈನಿಕರನ್ನು ಹೆಚ್ಚುವರಿಯಾಗಿ ಚೀನಾ ಗಡಿಯಲ್ಲಿ ನಿಯೋಜಿಸಲಾಗಿದೆ. ಈಗ ಬರೋಬ್ಬರಿ ಎರಡು ಲಕ್ಷದಷ್ಟು ಸೈನಿಕರು ಭಾರತ ಚೀನಾ ಗಡಿಯನ್ನು ಕಾವಲು ಕಾಯುತ್ತಿದ್ದಾರೆ. ಹಲವು ದಶಕಗಳ ನಂತರ ಮೊದಲ ಬಾರಿಗೆ ಚೀನಾ ಗಡಿಯಲ್ಲಿ ಇಷ್ಟರ ಮಟ್ಟಿನ ಸೇನೆ ಜಮಾವಣೆಯಾಗಿದೆ.

ಪ್ರಪಂಚದ ಎರಡನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ಚೀನಾದೊಂದಿಗೆ 1962ರಲ್ಲಿ ಭಾರತ ಕೊನೆಯ ಬಾರಿಗೆ ಯುದ್ದ ಮಾಡಿತ್ತು. ಇದಕ್ಕೂ ಮೊದಲು ಹಾಗೂ ನಂತರವೂ ಪಾಕಿಸ್ತಾನ ಗಡಿಯಡೆಗೆ ಹೆಚ್ಚಿನ ಗಮನ ಹರಿಸಲಾಗಿತ್ತು. 1962ರ ಬಳಿಕ ಚೀನಾ ಸೈನಿಕರೊಂದಿಗೆ ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಅತೀ ದೊಡ್ಡ ಮುಖಾಮುಖಿ ನಡೆದಿತ್ತು. ಭಾರತದ ಹಲವು ಸೈನಿಕರು ಈ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು.
ಈ ಘಟನೆಯ ನಂತರ ಪಾಕಿಸ್ತಾನದೊಂದಿಗೆ ನಡೆಯುತ್ತಿದ್ದ ಮುಸುಕಿನ ಯುದ್ದ ಅಲ್ಪಮಟ್ಟಿಗೆ ತಣ್ಣಗಾಗಿ, ಭಾರತವು ಚೀನಾ ಗಡಿಯೆಡೆಗೆ ಗಮನ ಹರಿಸಿತ್ತು. ಭಾರತ ಹಾಗೂ ಚೀನಾ ಎರಡೂ ರಾಷ್ಟ್ರಗಳು ಭಾರಿ ಸಂಖ್ಯೆಯಲ್ಲಿ ಸೇನೆ ಮತ್ತು ಸೇನಾ ಪರಿಕರಗಳ ಜಮಾವಣೆಯನ್ನು ಮಾಡಲು ಆರಂಭಿಸಿದ್ದವು. ಹಲವು ಬಾರಿ ಬೀಜಿಂಗ್ ನೊಂದಿಗೆ ಮಾತುಕತೆ ನಡೆಸಿದ ಬಳಿಕ ಸೇನೆಯನ್ನು ವಾಪಾಸ್ ಪಡೆಯಲು ತೀರ್ಮಾನಿಸಲಾಗಿತ್ತು. ಆದರೆ, ಇದ್ಯಾವುದೂ ಪ್ರಯೋಜವಾಗಿರಲಿಲ್ಲ.

ಈ ಹಿಂದೆ ಕೇವಲ ಚೀನಿ ಸೈನಿಕರನ್ನು ತಡೆಯಲು ಶಕ್ತವಾಗುವಷ್ಟು ಮಾತ್ರ ಸೇನಾ ತುಕಡಿಯನ್ನು ನಿಯೋಜಸಲಾಗಿತ್ತು. ಆದರೆ, ಈಗ ನಿಯೋಜಿಸಿರುವ ಸೇನಾ ತುಕಡಿಯ ಸಂಖ್ಯೆ ಚೀನಾ ಮೇಲೆ ದಾಳಿ ಮಾಡುವಷ್ಟು ಶಕ್ತವಾಗಿದೆ ಎಂದು ಮಿಲಿಟರಿ ತಜ್ಞರು ಹೇಳುತ್ತಾರೆ. ದಾಳಿಯ ಜತೆ ಜತೆಗೇ, ಚೀನಾ ವಶಪಡಿಸಿಕೊಂಡಿರುವ ಭೂಮಿಯನ್ನೂ ಭಾರತ ವಶಪಡಿಸಿಕೊಳ್ಳುವ ಸಾಧ್ಯತೆಗಳಿವೆ.
ಪ್ರಸ್ತುತ ಗಡಿಯಲ್ಲಿ ಚೀನಾ ದೇಶದ ಸೈನಿಕರು ಎಷ್ಟು ಸಂಖ್ಯೆಯಲ್ಲಿ ಜಮಾವಣೆಯಾಗಿದ್ದಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಆದರೆ, ಟಿಬೇಟ್ ನಲ್ಲಿ ನಿಯುಕ್ತರಾಗಿದ್ದ ಚೀನೀ ಸೈನಿಕರ ತುಕಡಿಯು, ಕ್ಸಿನ್ ಜಿಯಾಂಗ್ ಮಿಲಿಟರಿ ಕಮಾಂಡ್ ಜತೆ ಸೇರ್ಪಡೆಯಾಗಿದೆ. ಈ ಪಡೆಯು, ಹಿಮಾಲಯದುದ್ದಕ್ಕೂ, ಗಸ್ತು ತಿರುಗಲು ಬಳಸುವ ತುಕಡಿಯಾಗಿದೆ.
ಇನ್ನು ಟಿಬೆಟ್ ನ ವಿವಾದಿತ ಗಡಿಯಲ್ಲಿ ಹೊಸ ಏರ್ ಬೇಸ್ ಸೇರಿದಂತೆ ಯುದ್ದ ವಿಮಾನಗಳಿಗೆ ಬಾಂಬ್ ಪ್ರೂಫ್ ಬಂಕರ್ ಗಳನ್ನು ನಿರ್ಮಿಸಲು ಚೀನಾ ಆರಂಭಿಸಿದೆ. ಇದರೊಂದಿಗೆ, ಇತರ ಸೇನಾ ಪರಿಕರಗಳ ಜಮಾವಣೆಯತ್ತ ಕೂಡಾ ಚೀನಾ ಗಮನ ಹರಿಸಿದೆ.

ಈ ಹಂತದಲ್ಲಿ ಚೀನೀ ಸೈನಿಕರ ಬಲದ ಕುರಿತು ತಪ್ಪಾದ ಲೆಕ್ಕಾಚಾರ ಮಾಡಿದ್ದಲ್ಲಿ, ಗಲ್ವಾನ್ ಸಂಘರ್ಷಕ್ಕಿಂತಲೂ ದೊಡ್ಡ ಮಟ್ಟದ ಘರ್ಷಣೆ ಉಂಟಾಗುವ ಸಾಧ್ಯತೆಯಿದೆ. ಈ ಹಿಂದಿನಂತೆ ಯಥಾ ಸ್ಥಿತಿಯನ್ನು ಮುಂದುವರೆಸಲು ನಡೆಸಿರುವ ಮಾತುಕತೆಗಳು ಕೂಡಾ ಅಷ್ಟರಮಟ್ಟಿಗೆ ಪ್ರಯೋಜನವಾಗಲಿಲ್ಲ.

ಕಳೆದ ನಾಲ್ಕು ದಶಕಗಳಲ್ಲಿಯೇ ಕಂಡಿರದ ಮಟ್ಟಿಗೆ ಭಾರತ ಆರ್ಥಿಕತೆ ಪಾತಾಳಕ್ಕೆ ಇಳಿದಿದೆ. ಇಂತಹ ಸಂದರ್ಭದಲ್ಲಿ ಕೋವಿಡ್ ಸಂಕಷ್ಟವೂ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಸಂದರ್ಭದಲ್ಲಿ ಚೀನಾದೊಂದಿಗೆ ಕೈಮಿಲಾಯಿಸುವ ಪರಿಸ್ಥಿತಿ ಎದುರಾದರೆ, ಭಾರತ ದಿಟ್ಟ ಉತ್ತರವನ್ನು ನೀಡುವುದರಲ್ಲಿ ಸಂಶಯವೇನೂ ಇಲ್ಲ. ಆದರೆ, ಇದರ ಪರಿಣಾಮ ಭಾರತದ ಮೇಲೆ ಮತ್ತಷ್ಟು ಘೋರವಾಗಿರಲಿದೆ.





