ನವದೆಹಲಿ (NewDelhi): ಭಾರತದೊಂದಿಗೆ (India) ರಾಜತಾಂತ್ರಿಕ ಸಂಘರ್ಷಕ್ಕೆ ಇಳಿದಿರುವ ಮಾಲ್ಡೀವ್ಸ್ (Maldives) ಗೆ ಭಾರತ ಪ್ರಬಲ ತಿರುಗೇಟು ನೀಡಿದೆ.
ಹೌದು, ನೂತನ ನೌಕಾನೆಲೆ ‘INS Jatayu’ ಕಾರ್ಯಾರಂಭ ಮಾಡುವ ಮೂಲಕ ಪ್ರಬಲ ತಿರುಗೇಟು ನೀಡಿದೆ.
ಭಾರತ ಮಾಲ್ಡೀವ್ಸ್ ನಿಂದ ಕೂಗಳತೆ ದೂರದಲ್ಲಿ ತನ್ನ ನೌಕಾನೆಲೆ ಆರಂಭಿಸಿದೆ. ಮಾಲ್ಡೀವ್ಸ್ ನಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ಲಕ್ಷದ್ವೀಪದ ಮಿನಿಕಾಯ್ ದ್ವೀಪ (Minicoy Island)ದಲ್ಲಿಯೇ ಭಾರತೀಯ ನೌಕಾಪಡೆಯು (Indian Navy) ‘ಐಎನ್‌ಎಸ್ ಜಟಾಯು’ ಎಂಬ (INS Jatayu) ನೌಕಾನೆಲೆಯನ್ನು ಆರಂಭಿದೆ.
ಜಟಾಯು ಹೆಸರೇಕೆ?
ರಾಮಾಯಣದ ಜಟಾಯು ಹೆಸರನ್ನೇ ಲಕ್ಷದ್ವೀಪದ ನೌಕಾನೆಲೆಗೆ ಇಡಲಾಗಿದೆ. ರಾವಣನು ಸೀತೆಯನ್ನು ಅಪಹರಣ ಮಾಡಲು ಮುಂದಾದಾಗ ಆತನನ್ನು ಮೊದಲು ತಡೆಯಲು ಯತ್ನಿಸಿದ್ದೇ ಜಟಾಯು. ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೀತೆಯ ರಕ್ಷಣೆಗೆ ಮುಂದಾದ ಜಟಾಯು ನಿಸ್ವಾರ್ಥವು ಮಾದರಿಯಾಗಿದೆ. ಹಾಗಾಗಿ, ದೇಶದ ರಕ್ಷಣೆ, ಸಮುದ್ರ ಪ್ರದೇಶದಲ್ಲಿ ಹೆಚ್ಚಿನ ನಿಗಾ, ಸ್ವಾರ್ಥ ಲೆಕ್ಕಿಸದೆ ಹೋರಾಟ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ನೌಕಾನೆಲೆಗೆ ಜಟಾಯು ಎಂದು ಹೆಸರಿಡಲಾಗಿದೆ.
ಚೀನಾಗೆ ತಲೆನೋವು?
ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುವ ಚೀನಾ (china), ಇದೇ ಕಾರಣಕ್ಕೆ ದ್ವೀಪರಾಷ್ಟ್ರ ಮಾಲ್ಡೀವ್ಸ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಜಾಗತಿಕ ವ್ಯಾಪಾರದ ಬಹುಪಾಲು ವ್ಯಾಪಾರ ವಹಿವಾಟು ನಡೆಯುವುದೇ ಈ ಹಿಂದೂ ಮಹಾಸಾಗರದ ಮಾರ್ಗದಲ್ಲಿ. ಈ ಮಾರ್ಗದಲ್ಲಿ ನಿಯಂತ್ರಣ ಸಾಧಿಸಿದರೆ ಚೀನಾ ಜಗತ್ತಿನ ದೊಡ್ಡಣ್ಣ ಆಗುತ್ತೇನೆ ಎಂಬ ಉತ್ಸಾಹದಲ್ಲಿದೆ. ಇದೇ ಕಾರಣಕ್ಕೆ ಸಾಲ, ಮೂಲ ಸೌಕರ್ಯ ಅಭಿವೃದ್ದಿ ಮತ್ತು ಇತರೆ ಆಮಿಷಗಳನ್ನು ನೀಡಿ ಮಾಲ್ಡೀವ್ಸ್ ಅನ್ನು ತನ್ನ ನಿಯಂತ್ರಣಕ್ಕೆ ಪಡೆಯಲು ಹವಣಿಸುತ್ತಿದೆ. ಅದರ ವ್ಯೂಹದ ಪರಿಣಾಮವಾಗಿಯೇ ಇದೀಗ ಮಾಲ್ಡೀವ್ಸ್ ತನ್ನ ದೇಶದಲ್ಲಿರುವ ಭಾರತೀಯ ಸೈನಿಕರನ್ನು ವಾಪಸ್ ಕರೆಸಿಕೊಳ್ಳಿ ಎಂದು ಪಟ್ಟು ಹಿಡಿದಿದೆ.
ಏನು ಉಪಯೋಗ?
ಚೀನಾದ ಸಂಶೋಧನಾ ಹಡಗುಗಳ ಸಂಚಾರದ ಮೇಲೆ ನಿಗಾ ಇರಿಸಲು ಈ ನೌಕಾನೆಲೆ ನೆರವಾಗಲಿದ್ದು, ಚೀನಾದ ಕುಮ್ಮಕ್ಕಿನಿಂದ ಸಮುದ್ರ ಪ್ರದೇಶದಲ್ಲಿ ಮಾಲ್ಡೀವ್ಸ್ ಆಕ್ರಮಣಕಾರಿ ನೀತಿ ಅನುಸರಿಸಿದರೆ ತಿರುಗೇಟು ನೀಡಲು ಸಹಕಾರಿಯಾಗುತ್ತದೆ.
ಪಶ್ಚಿಮ ಅರಬ್ಬಿ ಸಮುದ್ರದಲ್ಲಿ ವೈರಿಗಳ ಮೇಲೆ ಹೆಚ್ಚಿನ ನಿಗಾ ಇರಿಸಲು ಈ ಐಎನ್ ಎಸ್ ಜಟಾಯು ನೆರವಾಗುತ್ತದೆ. ಈ ನೌಕಾನೆಲೆಯಿಂದ ಸಾಗರ ಪ್ರದೇಶದಲ್ಲಿ ಭಯೋತ್ಪಾದನೆ, ಅಪರಾಧ ತಡೆಗಟ್ಟಲು ಅನುಕೂಲವಾಗುತ್ತದೆ. ಸಮುದ್ರ ಪ್ರದೇಶದಲ್ಲಿ ಮಾದಕ ವಸ್ತು ಅಕ್ರಮ ಸಾಗಣೆ ನಿಯಂತ್ರಣಕ್ಕೆ ಇದು ನೆರವಾಗಲಿದ್ದು, ಒಂದು ವೇಳೆ ಯಾವುದೇ ರೀತಿಯ ಕ್ಷಿಪ್ರವಾಗಿ ಡ್ರೋನ್, ಕ್ಷಿಪಣಿ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಸಹಕಾರಿಯಾಗುತ್ತದೆ. ಸಾಗರ ಪ್ರದೇಶದಲ್ಲಿ ಯಾವುದೇ ದುರಂತ, ದಾಳಿ ನಡೆದರೆ ವೇಗವಾಗಿ ತಿರುಗೇಟು ನೀಡಬಹುದಾಗಿದೆ. ಸಮುದ್ರ ಪ್ರದೇಶದಲ್ಲಿ ಅಕ್ರಮ ಸಾಗಣೆ, ಹಡಗುಗಳ ಸಂಚಾರದ ಮೇಲೆ ಹದ್ದಿನ ಕಣ್ಣಿಡಲು ನೆರವಾಗುತ್ತದೆ.
#Newdelhi #INSJatayu #Jatayu #IndianNavy #India #Maldives