ರಾಜ್ಯದಲ್ಲಿ ಮಳೆರ ಅಬ್ಬರ ಜೋರಾಗಿದ್ದು, ಉತ್ತರ ಕನಾ್ಟಕದ ಬಹುತೇಕ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ಅತಿಯಾದ ಮಳೆಯಿಂದ ಜಮೀನಿನಲ್ಲೇ ಈರುಳ್ಳಿ ಕೊಳೆತು ಹೋಗಿದೆ. ಕಷ್ಟಪಟ್ಟು ಬೆಳೆದ ಈರುಳ್ಳಿ ಹಾಳಾಗಿದ್ದು ನೋಡಿ ರೈತರು ಗೋಳಾಡುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.. ಕಟಾವು ಮಾಡಿದ ಈರುಳ್ಳಿಯೂ ಸಂಪೂರ್ಣ ಹಾಳಾಗಿದೆ.
ಕಟಾವಿಗೆ ಬಂದ ಮಕ್ಕೆ ಜೋಳದ ಬೆಳೆ ಸಂಪೂರ್ಣ ಹಾನಿ ಆಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ದಂಟಿನ ತೆನೆಗಳಲ್ಲಿ ಮೊಳಕೆ ಒಡೆದಿವೆ. ಅತಿಯಾದ ಮಳೆಗೆ ಕಟಾವಿಗೆ ಬಂದ ಮೆಕ್ಕೆಜೋಳ ಮೊಳಕೆ ಒಡೆದು ಸಂಪೂರ್ಣ ಹಾನಿ ಆಗಿದೆ. ಉತ್ತಮ ಮಳೆಯಾಗಿ ಬೆಳೆ ಕೈಗೆ ಬರುತ್ತೆ ಎಂದು ನೀರಿಕ್ಷೆಯಲ್ಲಿದ್ದ ರೈತರಿಗೆ ಆಘಾತ ಎದುರಾಗಿದೆ. ಕೆರೂರ ಗ್ರಾಮದ ರೈತ ಬಾಪು ಎಂಬುವವರು ಬೆಳೆದ ಬೆಳೆ ಸಂಪೂರ್ಣ ಹಾನಿಯಾಗಿದ್ದು, 70 ಸಾವಿರ ಖರ್ಚು ಮಾಡಿ ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮಕ್ಕೆ ಜೋಳ ಹಾನಿ ಆಗಿದೆ. ಕಳೆದ ವರ್ಷ ಬರಗಾಲದಲ್ಲಿ ನೀರಿಲ್ಲದೆ ಬೆಳೆ ಒಣಗಿ ಹೋಗಿತ್ತು. ಈ ಬಾರಿ ಮಳೆ ಹೆಚ್ಚಾಗಿ ಬೆಳೆಗಳು ಹಾಳಾಗಿವೆ ಎಂದು ಕಣ್ಣೀರು ಹಾಕಿದ್ದಾರೆ.
ಉತ್ತಮ ಮಳೆಯಾಗಿತ್ತು, ಉತ್ತಮ ಫಸಲು ಬರುವ ನಿರೀಕ್ಷೆಯೂ ಇತ್ತು. ಆದರೆ ಕಟಾವು ಸಂದರ್ಭದಲ್ಲಿ ಮತ್ತೆ ಮಳೆ ಬಂದಿದ್ದು, ಅತಿಯಾದ ಮಳೆ ಹಿನ್ನಲೆ ಮಕ್ಕೆಜೋಳ, ಕೊತ್ತಂಬರಿ, ತರಕಾರಿ ಬೆಳೆಗಳು ಹಾನಿಯಾಗಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ರಾಯಬಾಗ, ಹುಕ್ಕೇರಿ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಅನ್ನದಾತರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಕೂಡಲೆ ಬೆಳೆ ಪತಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿರುವ ರೈತರು, ಬೆಳೆ ಕಟಾವು ಮಾಡುವ ಮುನ್ನವೇ ಸಮೀಕ್ಷೆ ನಡೆಸುವಂತೆ ಆಗ್ರಹ ಮಾಡಿದ್ದಾರೆ.