ಸೆಪ್ಟೆಂಬರ್ 28 ರಂದು ದೇಸೂರು ಮತ್ತು ಖಾನಾಪುರ ನಡುವಿನ ರೈಲ್ವೆ ಹಳಿಗಳ ಮೇಲೆ 24 ವರ್ಷದ ಯುವಕನ ಶವ ಪತ್ತೆಯಾಗಿತ್ತು. ಆತನ ಕೈಗಳನ್ನು ಕಟ್ಟಿ, ತಲೆ ಮತ್ತು ಒಂದು ಕಾಲನ್ನು ದೇಹದಿಂದ ಬೇರ್ಪಡಿಸಿ ಹಳಿಗಳ ನಡುವೆ ಎಸೆಯಲಾಗಿತ್ತು.
ಛಿದ್ರಗೊಂಡ ದೇಹದ ಭಾಗಗಳನ್ನ ಟ್ರ್ಯಾಕ್‌ಗಳಿಂದ ದೂರದಲ್ಲಿ ಎಸೆಯಲಾಗಿತ್ತು. ಮೃತದೇಹವನ್ನು ನೋಡಿದ ರೈಲ್ವೆ ಸಿಬ್ಬಂದಿ ಪರಿಶೀಲನೆ ವೇಳೆ ಯುವಕನ ಜೇಬಿನಲ್ಲಿದ್ದ ಮೊಬೈಲ್‌ನ ಮೂಲಕ ಆತನ ತಾಯಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸುತ್ತಾರೆ. ಸ್ಥಳಕ್ಕೆ ಆಗಮಿಸಿದ ಯುವಕನ ತಾಯಿ ಶವವನ್ನು ಗುರುತಿಸುತ್ತಾರೆ ಮೃತ ಯುವಕನ ಹೆಸರು ಅರ್ಬಾಜ್ ಅಫ್ತಾಬ್ ಮುಲ್ಲಾ.
ಪ್ರಕರಣದ ತನಿಖೆಯ ವೇಳೆ ಪೊಲೀಸರಿಗೆ ‘ಶ್ರೀರಾಮ ಸೇನೆ ಹಿಂದುಸ್ಥಾನ್ ಸಂಘಟನೆಗೆ ಸೇರಿದ ಆಂಬುಲೆನ್ಸ್‌ನ ಗಾಜಿನ ಚೂರನ್ನ ಪತ್ತೆ ಹಚ್ಚುತ್ತಾರೆ. ಅಲ್ಲದೆ, ಘಟನೆಗೆ ಸಂಭಂದಿಸಿದಂತೆ ಪೊಲೀಸರು ‘ಶ್ರೀರಾಮ ಸೇನೆ ಹಿಂದುಸ್ಥಾನ್ ಸಂಘಟನೆಯ ಎಂಟು ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಖಾನಾಪುರದ ಕಾರ್ ಡೀಲರ್ ಅರ್ಬಾಜ್ ಅಫ್ತಾಬ್ ಮುಲ್ಲಾ ಹಿಂದೂ ಧರ್ಮಕ್ಕೆ ಸೇರಿದ ಹುಡುಗಿಯನ್ನು ಪ್ರೀತಿಸುತ್ತಿದ್ದ, ಈ ವಿಚಾರಕ್ಕೆ ಸಂಭಂಧಿಸಿದಂತೆ ಸಂಘಟನೆಯ ಸದಸ್ಯರು ಯುವಕನ್ನು ಹತ್ಯೆ ಮಾಡಿದ್ದಾರೆ
ಜೀವ ಬೆದರಿಕೆ
ತಮ್ಮನ್ನು ಸಾಮಾಜಿಕ ಕಾರ್ಯಕರ್ತರು ಎಂದು ಪರಿಚಯಿಸಿಕೊಂಡ ಕೆಲವು ವ್ಯಕ್ತಿಗಳು ತಮ್ಮ ಮಗನಿಗೆ ಬೆದರಿಕೆ ಹಾಕುತ್ತಿದ್ದರು ಎಂದು ಶ್ರೀಮತಿ ಶೇಖ್ ತಿಳಿಸಿದ್ದಾರೆ. ತನ್ನ ಪೊಲೀಸ್ ದೂರಿನಲ್ಲಿ, ಪುಂಡಲೀಕ್ ಮಹಾರಾಜ್ ಮತ್ತು ಆತನ ಅನುಯಾಯಿ ಬಿರ್ಜೆ ತನ್ನ ಮಗನನ್ನು ಕೊಂದಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
ಒಟ್ಟು 8 ಜನರನ್ನು ರೈಲ್ವೆ ಪೊಲೀಸರು ಬಂಧಿಸಿದ್ದು ಇವರೆಲ್ಲ ಶ್ರೀರಾಮಸೇನೆ ಹಿಣಂದೂಸ್ತಾನ್ ಸದಸ್ಯರು.
ಸರ್ಕಾರಿ ಶಾಲಾ ಶಿಕ್ಷಕಿ ಶ್ರೀಮತಿ ಶೇಖ್, ಪುಂಡಲೀಕ್ ಮಹಾರಾಜ ಮತ್ತು ಆತನ ಸಹಚರರು ತಮ್ಮ ಮಗನಿಂದ “ಸೆಟಲ್ಮೆಂಟ್ ಮನಿ”ಯನ್ನು ಕೋರಿದ್ದರು ಎಂದು ಆರೋಪಿಸಿದ್ದಾರೆ. “ಆತನು ಅವರಿಗೆ 7,000 ರೂ ಪಾವತಿಸಿದ್ದ.. ಆದರೆ ಅವರು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಅವರು ಆತನಿಂದ 90,000 ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು.. ನಾನು ಅದನ್ನು ತೀರಿಸಲು ಮತ್ತು ಇಡೀ ಸಮಸ್ಯೆಯನ್ನು ಮರೆತುಬಿಡುವಂತೆ ಹೇಳಿದ್ದೆ. ಅವನು ಹಣವನ್ನು ವ್ಯವಸ್ಥೆ ಮಾಡುತ್ತಿದ್ದ ಎಂದು ನಜೀಮಾ ದೂರಿನಲ್ಲಿ ಅಪಾದಿಸಿದ್ದಾರೆ.
“ನನ್ನ ಗಂಡ ತೀರಿಕೊಂಡ ನಂತರ, ನಾನು ನನ್ನ ತಾಯಿ ಮತ್ತು ನನ್ನ ಮಗನೊಂದಿಗೆ ವಾಸಿಸುತ್ತಿದ್ದೆ. ನನ್ನ ಮಗಳು ಮದುವೆಯ ನಂತರ ಇಂಗ್ಲೆಂಡಿನಲ್ಲಿ ನೆಲೆಸಿದ್ದಾಳೆ. ನನ್ನ ಮಗ ಇಂಜಿನಿಯರ್ ಆಗಿದ್ದು, ಕಾರು ಮರುಮಾರಾಟ ವ್ಯವಹಾರದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದ. ಈಗ, ನನ್ನ ಬೆಂಬಲದ ಏಕೈಕ ಮೂಲವನ್ನು ಕಸಿದುಕೊಳ್ಳಲಾಗಿದೆ, ”ಎಂದು ಅವರು ದೂರಿದ್ದಾರೆ.
ಮಹಾರಾಜ್ ತನಗೆ ಮತ್ತು ಅರ್ಬಾಜ್‌ಗೆ ಜೀವ ಬೆದರಿಕೆ ಹಾಕಿದ್ದ ಎಂದು ನಜೀಮಾ ಆರೋಪಿಸಿದ್ದಾರೆ. ‘ನನ್ನ ವಿರುದ್ಧ 40 ಪ್ರಕರಣಗಳು ಬಾಕಿಯಿವೆ ಮತ್ತು ಇನ್ನೊಂದು ಪ್ರಕರಣ ಸೇರಿದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನಜೀಮಾರಿಗೆ ಪುಂಡಲೀಕ ಮಹಾರಾಜ್ ತಿಳಿಸಿದ್ದ. ನಮಗೆ ಭಯವಾಯಿತು. ವಿಚಾರಣೆಯನ್ನು ಎದುರಿಸಲು ಮಹಾರಾಜ್ ನಮ್ಮನ್ನು ಖಾನಾಪುರಕ್ಕೆ ಕರೆದಿದ್ದ. ಆದರೆ ನಾವು ಹೋದಾಗ, ಹುಡುಗಿಯ ತಂದೆಯೊಂದಿಗೆ ಕೆಲವೇ ವ್ಯಕ್ತಿಗಳು ಇದ್ದರು. ನಾನು ಹುಡುಗಿಯ ತಾಯಿಯೊಂದಿಗೆ ಮಾತನಾಡಿದ್ದೆ ಮತ್ತು ನಾವು ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದೆವು ಕುಟುಂಬಗಳು ನಿರ್ಧಾರ ತೆಗೆದುಕೊಂಡಾಗ, ಹೊರಗಿನವರು ಮಧ್ಯಪ್ರವೇಶಿಸುವ ಅಗತ್ಯವೇನು? ನಾನು ಈ ಪ್ರಶ್ನೆಯನ್ನು ಎತ್ತಿದಾಗ, ಮಹಾರಾಜನು ಕೋಪಗೊಂಡ ಮತ್ತು ಮುಸ್ಲಿಂ ಹುಡುಗನು ಹಿಂದೂ ಹುಡುಗಿಯೊಂದಿಗೆ ಸಂಬಂಧವನ್ನು ಹೊಂದಿರುವುದು ಅವರ ತತ್ವಗಳಿಗೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದ. ಆದರೆ ಅವರು ನನ್ನ ಮಗನನ್ನು ಕೊಲ್ಲುವ ಮಟ್ಟಕ್ಕೆ ಹೋಗುತ್ತಾರೆ ಎಂದು ನನಗೆ ತಿಳಿದಿರಲಿಲ್ಲ ” ಎಂದು ನಜೀಮಾ ತಿಳಿಸಿದ್ದಾರೆ. “ಅಪರಾಧಿಗಳಿಗೆ ಶಿಕ್ಷೆಯಾಗುವುದನ್ನು ನೋಡಲು ನಾನು ಕಾನೂನು ಹೋರಾಟ ನಡೆಸುತ್ತೇನೆ’ ಎಂದು ನಜೀಮಾ ದೃಢ ನಿರ್ಧಾರಮಾಡಿದ್ದಾರೆ.
ಅರ್ಬಾಜ್ ಸೋದರ ಸಂಬಂಧಿ ಸಮೀರ ಪ್ರತಿಧ್ವನಿಗೆ ಪ್ರತಿಕ್ರಿಯಿಸಿ, ಅರ್ಬಾಜ್ ಕುಟುಂಬ ಬೆಳಗಾವಿಯಲ್ಲಿ ವಾಸವಿದೆ. ಖಾನಾಪುರದಲ್ಲಿ ಮನೆ ಕಟ್ಟಿಸುತ್ತಿದ್ದರಿಂದ ಅರ್ಬಾಜ್ ದಿನವೂ ಅಲ್ಲಿಗೆ ಹೋಗಿ ಬರುತ್ತಿದ್ದ. ಹಿಂದೂ ಹುಡುಗಿ ಜೊತೆಗೆ ಪ್ರೇಮವಿತ್ತು. ಆದರೆ ಇದನ್ನು ಇಶ್ಯೂ ಮಾಡಿದ ಕೆಲವರು ಅರ್ಬಾಜ್‍ನಿಂದ ಹಣ ವಸೂಲಿ ಮಾಡಿದ್ದಲ್ಲದೇ ಕೊಂದೂ ಹಾಕಿದ್ದಾರೆ ಎಂದು ತಿಳಿಸಿದರು.
ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಬುಧವಾರದ ಮೊದಲು ಎಲ್ಲ ಅಪರಾಧಿಗಳನ್ನು ಬಂಧಿಸದಿದ್ದರೆ ಶುಕ್ರವಾರ ಪ್ರತಿಭಟನಾ ರ್ಯಾಲಿ ನಡೆಸಲಿದೆ. “ನಾವು ಸಂಸದ ಅಸಾದುದ್ದೀನ್ ಓವೈಸಿ ಅವರನ್ನು ಆಹ್ವಾನಿಸಲು ಯೋಜಿಸುತ್ತಿದ್ದೇವೆ” ಎಂದು ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಲತೀಫ್ ಖಾನ್ ಪಠಾಣ್ ಬೆಳಗಾವಿಯಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ವಸೂಲಿ ದಂಧೆ.
ಶ್ರೀರಾಮಸೇನೆಯಿಂದ ಒಡೆದು ಹೋದ ಗುಂಪು ಬೆಳಗಾವಿ ಜಿಲ್ಲೆಯಲ್ಲಿ ಶ್ರೀರಾಮಸೇನೆ ಹಿಂದೂಸ್ತಾನ್ ಎಂಬ ಹೊಸ ಸಂಘಟನೆ ಮಾಡಿಕೊಂಡಿದೆ. ರಮಾಕಾಂತ್ ಕೊಳಸ್ಕರ್ ಇದನ್ನು ಸ್ಥಾಪಿಸಿದ್ದಾನೆ. ಪುಂಡಲೀಕ ಮಹಾರಾಹ್ ಖಾನಾಪುರ ತಾಲೂಕು ಘಟಕದ ಅಧ್ಯಕ್ಷ. ಲವ್ ಜಿಹಾದ್ ನೆಪದಲ್ಲಿ ಹಣ ವಸೂಲಿ ಮಾಡುವ ದಂಧೆಯನ್ನು ಈ ಕ್ರಿಮಿನಲ್ ಗುಂಪು ಮಾಡುತ್ತ ಬಂದಿದೆ. ಅವನೇ ಹೇಳಿದಂತೆ ಪುಂಡಲೀಕ್ ಮೇಲೆ 40 ಕೇಸುಗಳಿವೆ. ಈ ಸಲ ಈ ಗುಂಪು ಕೊಲೆ ಮಾಡುವ ಹಂತಕ್ಕೂ ತಲುಪಿದೆ/
‘ಪ್ರತಿಧ್ವನಿ’ ಜೊತೆ ಮಾತನಾಡಿದ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್.ಶ್ರೀರಾಮಸೇನೆಗೂ ಶ್ರಿರಾಮ ಸೇನೆ ಹಿಂದೂಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಮಂಗಳೂರಿನಲ್ಲಿ ಪ್ರಸಾದ್ ಅತ್ತಾವರ್ ನಮ್ಮ ಸಂಘಟನೆಯಿಂದ ದೂರವಾಗಿ ರಾಮಸೇನೆ ಎಂಬ ಸಂಘಟನೆ ನಡೆಸುತ್ತಿದ್ದಾನೆ. ಅದಕ್ಕೂ ನಮಗೂ ಸಂಬಂಧವಿಲ್ಲ’’ ಎಂದು ತಿಳಿಸಿದರು.
ಶ್ರೀರಾಮಸೇನೆ ಮತ್ತು ಭಜರಂಗದಳಗಳ ಹಾವಳಿ ಕರಾವಳಿಯಲ್ಲಿ ಮಿತಿಮೀರಿದೆ. ಇತ್ತೀಚೆಗೆ ಅಲ್ಲಿ ನೈತಿಕ ಪೊಲೀಸ್‍ಗಿರಿ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ‘ಪ್ರತಿಧ್ವನಿ ವಿವರವಾಗಿ ಬರೆದಿತ್ತು.
‘ಗೋ ರಕ್ಷಣೆಯ ಹೆಸರಿನಲ್ಲಿ ವಸೂಲಿ ಮಾಡುವುದು ಈ ಸಂಘಟನೆಗಳ ನಿತ್ಯದ ದಂಧೆ. ಪಬ್, ಬಾರ್‍ಗಳಲ್ಲಿ ಸೆಕ್ಯುರಿಟಿ ಗಾರ್ಡ್, ಬೌನ್ಸ್‍ರಗಳನ್ನು ನೇಮಿಸುವುದು ಈ ಸಂಘಟನೆಗಳೇ. ಅದರಲ್ಲೂ ದೊಡ್ಡ ಕಮೀಷನ್ ಸಿಗುತ್ತದೆ’ ಎನ್ನುತ್ತಾರೆ ಪತ್ರಕರ್ತ ನವೀನ್ ಸೂರಿಂಜೆ.
ಲವ್ ಜಿಹಾದ್ ಎಂಬ ಕಪೋಲಕಲ್ಪಿತ ವಿದ್ಯಮಾನವೂ ಇವರ ವಸೂಲಿ ದಂಧೆಗೆ ನೆರವಾಗುತ್ತಿದೆ. ಭಿನ್ನ ಧರ್ಮಗಳ ಯುವಕ ಯುವತಿಯರು ಮಾತನಾಡಿದರೆ ಸಾಕು, ಅದಕ್ಕೆ ಲವ್ ಜಿಹಾದ್ ಬಣ್ಣ ಹಚ್ಚಿ ವಸೂಲಿ ಮಾಡುತ್ತಿದ್ದಾರೆ. ಈಗ ಬೆಳಗಾವಿಯಲ್ಲಿ ಶ್ರೀರಾಮಸೇನೆ ಹಿಂದೂಸ್ಥಾನ್ ಎಂಬ ಸಂಘಟನೆಯ ಪುಂಡರು ಅರ್ಬಾಜ್ ಎಂಬ ಯುವಕನಿಂದ ಹಣ ಪಡೆದೂ ಆತನ ಕೊಲೆ ಮಾಡಿ ಸಿಕ್ಕಿ ಬಿದ್ದಿದ್ದಾರೆ.