ಮೈಸೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಘೋಷಣೆಗೂ ಮುನ್ನ ಸಚಿವ ವಿ.ಸೋಮಣ್ಣ ತಮ್ಮ ಪುತ್ರನಿಗೂ ಈ ಬಾರಿ ಬಿಜೆಪಿಯಿಂದ ಟಿಕೆಟ್ ಬೇಕೆಂದು ಭಾರೀ ಕಸರತ್ತು ನಡೆಸಿದ್ದರು. ಆದರೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ ಬಳಿಕ ವಿ.ಸೋಮಣ್ಣರ ಪುತ್ರನಿಗೆ ಟಿಕೆಟ್ ಸಿಗೋದು ಹಾಗಿರಲಿ ಸ್ವಕ್ಷೇತ್ರವೇ ತಪ್ಪಿ ಹೋಗಿತ್ತು.
ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟು ಸೋಮಣ್ಣಗೆ ವರುಣ ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಸಲಾಗಿದೆ. ವರಿಷ್ಠರ ಈ ನಿರ್ಧಾರದಿಂದ ಬೇಸರಗೊಂಡಿದ್ದ ವಿ,ಸೋಮಣ್ಣ ಅಮಿತ್ ಶಾ ಜೊತೆ ಒಂದು ಸುತ್ತಿನ ಮಾತುಕತೆ ನಡೆಸುತ್ತಿದ್ದಂತೆಯೇ ಸೈಲೆಂಟ್ ಆಗಿದ್ದರು. ಈಗ ಈ ವಿಚಾರವಾಗಿ ಸತ್ಯ ಬಾಯ್ಬಿಟ್ಟಿರುವ ಸಚಿವ ವಿ. ಸೋಮಣ್ಣ ವರುಣ ಕ್ಷೇತ್ರದಲ್ಲಿ ನಾನು ಸಿದ್ದರಾಮಯ್ಯರನ್ನು ಸೋಲಿಸಿದರೆ ಪಕ್ಷದಲ್ಲಿ ಬಹುದೊಡ್ಡ ಸ್ಥಾನ ಸಿಗಲಿದೆ ಎಂಬ ಭರವಸೆ ಸಿಕ್ಕಿದೆ ಎಂದು ಹೇಳುವ ಮೂಲಕ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಅನ್ನೋದು ದೊಡ್ಡ ಕನಸು. ಸೋಮಣ್ಣರನ್ನು ವರುಣದಲ್ಲಿ ಗೆಲ್ಲಿಸಿ ದೊಡ್ಡ ಸ್ಥಾನ ನೀಡುತ್ತೇವೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ನಾನು ಹರಕೆಯ ಕುರಿ ಅಲ್ಲ ಎಂದು ಸೋಮಣ್ಣ ಹೇಳಿದ್ದಾರೆ.
ಲಿಂಗಾಯತ ಹೇಳಿಕೆಗೆ ಸಿದ್ದರಾಮಯ್ಯ ಕ್ಷಮೆಯಾಚಿಸಿದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ, ಒಡೆದ ಮೊಸರು ಮತ್ತೆ ಸರಿಯಾಗೋಕೆ ಸಾಧ್ಯವಿಲ್ಲ ಎಂದಿದ್ದಾರೆ.