ಕೋಲಾರ: ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊನೆ ದಿನ ಬಿ ಫಾರಂ ಪಡೆದು ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿರುವ ಆದಿ ನಾರಾಯಣ ಸದ್ಯ ಬಿರುಸಿನ ಪ್ರಚಾರವನ್ನ ಕೈಗೊಂಡಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಕೇವಲ 7 ದಿನದಲ್ಲಿ ಹೆಚ್.ನಾಗೇಶ್ ರನ್ನು ಮುಳಬಾಗಿಲು ಕ್ಷೇತ್ರದಿಂದ ಗೆಲ್ಲಿಸಿದ್ದ ಕೊತ್ತೂರು ಮಂಜುನಾಥ್ ಅವರ ಹೆಸರಲ್ಲೇ ಆದಿನಾರಾಯಣ ಸಹ ಪ್ರಚಾರವನ್ನ ನಡೆಸುತ್ತಿದ್ದಾರೆ.
ಮುಳಬಾಗಿಲು ಹಳ್ಳಿಹಳ್ಳಿಯಲ್ಲೂ ಕೊತ್ತೂರು ಮಂಜುನಾಥ್ ರ ಅಭಿವೃದ್ಧಿ ಕಾರ್ಯಗಳನ್ನ ಜನರಿಗೆ ತಿಳಿಸುವ ಮೂಲಕ ಕೊತ್ತೂರು ಮಂಜುನಾಥ್ ಎನ್ನುವ ಬ್ರಾಂಡ್ ನಲ್ಲೇ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ವೇಳೆ ಕೊತ್ತೂರು ಮಂಜುನಾಥ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಮ್ಮ ಮುಂದೆ ಬಂದಿರುವ ಆದಿನಾರಾಯಣ್ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಇನ್ನು ಕೊತ್ತೂರು ಮಂಜುನಾಥ್ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತವನ್ಮು ಹೊಂದಿದ್ದು 5 ದಿನದಲ್ಲಿ ಚುನಾವಣೆ ನಡೆಸುವ ತಂತ್ರಗಾರಿಕೆಯನ್ನ ಸಹ ಈಗಾಗಲೇ ಹೆಣೆದಿದ್ದಾರೆ, ಆ ತಂತ್ರಗಾರಿಕೆಯನ್ನು ಆದಿನಾರಾಯಣ ಪಾಲಿಸುತ್ತಿದ್ದು ಜೆಡಿಎಸ್ ನ ದಳಪತಿ ಸಮೃದ್ಧಿ ಮಂಜುನಾಥ್ ಅವರಿಗೆ ಶಾಕ್ ನೀಡಿದ್ದಾರೆ.
ಇನ್ನು ನಂಗ್ಲಿ, ಮುಷ್ಟೂರು, ನಾಗವಾರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಇಂದು ಪ್ರಚಾರ ನಡೆಸಿದ ಆದಿನಾರಾಯಣಗೆ ಗ್ರಾಮಗಳಲ್ಲಿ ಪಠಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತ ಕೋರಿದ್ರು. ಆದಿನಾರಾಯಣ 2018ರಲ್ಲೂ ಪಕ್ಷೇತರವಾಗಿ ಸ್ಪರ್ಧಿಸಿದ್ದ ಆದಿನಾರಾಯಣ ಕ್ಷೇತ್ರದ ಬಗ್ಗೆ ಸಾಕಷ್ಟು ಅರಿವಿಲ್ಲದಿದ್ದರೂ ಕೊತ್ತೂರು ಮಂಜುನಾಥ್ ರ ಬೆಂಬಲಿಗರ ವಿಶ್ವಾಸ ಪಡೆದುಕೊಂಡು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ಪಡೆ ಹೆಚ್ಚಿದೆ, ಜನ ನನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ. ನಾನು ಶಾಸಕನಾಗಿ ಆಯ್ಕೆಯಾದರೆ ಮೊದಲಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.