‘ಮದ್ದೂರು ಉತ್ಸವ’ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಗ್ಗೆ ವ್ಯಕ್ತಪಡಿಸಿದ ಭಾವನಾತ್ಮಕ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ತಮ್ಮ ಜೀವನದ ಸಂಕಷ್ಟದ ಸಮಯದಲ್ಲಿ ನೆರವಾದ ಡಿಕೆ ಶಿವಕುಮಾರ್ ಅವರ ನೆರವನ್ನು ಸ್ಮರಿಸಿದ ರವಿಚಂದ್ರನ್, ವೇದಿಕೆಯಲ್ಲೇ ಭಾವುಕರಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜೀವನದಲ್ಲಿ ಕೆಲವೊಮ್ಮೆ ಕಠಿಣ ಸಂದರ್ಭಗಳು ಎದುರಾಗುತ್ತವೆ. ಆಗ ಯಾರಾದರೂ ನಮ್ಮ ನೆರವಿಗೆ ಬರುತ್ತಾರೆಯೇ ಎಂಬ ನಿರೀಕ್ಷೆ ಇರುತ್ತದೆ. ನಾನು ಎಂದಿಗೂ ಯಾರ ಮುಂದೆಯೂ ಸಹಾಯ ಕೇಳುವ ವ್ಯಕ್ತಿಯಲ್ಲ. ಆದರೆ ನನ್ನ ಕಷ್ಟವನ್ನು ನಾನು ಹೇಳುವ ಮುನ್ನವೇ ಅರಿತು, ನನ್ನ ಬೆನ್ನೆಲುಬಾಗಿ ನಿಂತವರು ಡಿ.ಕೆ. ಶಿವಕುಮಾರ್” ಎಂದು ಕೊಂಡಾಡಿದರು.

“ನಾವು ಶಾಲಾ ದಿನಗಳಿಂದಲೇ ಸ್ನೇಹಿತರು. ಸುಮಾರು 40-50 ವರ್ಷಗಳ ನಮ್ಮ ಸ್ನೇಹದಲ್ಲಿ ನಾನು ಎಂದಿಗೂ ಸ್ವಾರ್ಥಕ್ಕಾಗಿ ನಮ್ಮ ಬಾಂಧವ್ಯವನ್ನು ಬಳಸಿಕೊಂಡಿಲ್ಲ. ಆದರೆ ಇತ್ತೀಚೆಗೆ ನನ್ನ ಸಂಕಷ್ಟದ ಸಮಯದಲ್ಲಿ ನನ್ನ ಹೆಗಲ ಮೇಲೆ ಕೈ ಹಾಕಿ ಆತ್ಮೀಯತೆ ತೋರಿದ ಅವರ ಗುಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ಚಿತ್ರರಂಗದಲ್ಲಿ 40 ವರ್ಷ ಕಳೆದರೂ ಇಂತಹ ಪ್ರೀತಿ ನನಗೆ ಸಿಕ್ಕಿರಲಿಲ್ಲ. ಈ ಜೀವನದಲ್ಲಿ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ ಸರ್, ಈ ಜೀವ ನಿಮಗೇ ಅರ್ಪಣೆ” ಎಂದು ಭಾವುಕರಾದರು.

ತಮ್ಮ ವೃತ್ತಿಜೀವನದ ಹಾದಿಯನ್ನು ನೆನೆಸಿಕೊಂಡ ಅವರು, “ನಾನು ಜೀವನದಲ್ಲಿ ಸೋತಾಗಲೂ ಹೆದರಲಿಲ್ಲ. ಏಕೆಂದರೆ ಜನರು ನನ್ನ ಕೈಬಿಡಲಿಲ್ಲ. ‘ರಾಮಾಚಾರಿ’ ಚಿತ್ರದಲ್ಲಿ ಪಂಚೆ ತೊಟ್ಟು ಬಂದಾಗ ಹೇಗೆ ಪ್ರೀತಿಸಿದರು, ಇಂದು ಕಷ್ಟದ ಸಮಯದಲ್ಲೂ ಅದೇ ಪ್ರೀತಿ ಸಿಕ್ಕಿದೆ. ಅದರ ಜೊತೆಗೆ ನೀವು ನನ್ನ ಕೈ ಹಿಡಿದಿದ್ದೀರಿ, ಅದು ನನಗೆ ಸಾಕು” ಎಂದು ಕೃತಜ್ಞತೆ ಸಲ್ಲಿಸಿದರು.

ಮದ್ದೂರು ಉತ್ಸವದಲ್ಲಿ ಡಿಕೆ ಶಿವಕುಮಾರ್ ಮಾತ್ರವಲ್ಲದೆ, ಸ್ಥಳೀಯ ಶಾಸಕ ಕೆ.ಎಂ. ಉದಯ್ ಅವರ ಸಹಾಯವನ್ನೂ ರವಿಚಂದ್ರನ್ ಸ್ಮರಿಸಿದರು. “ಉದಯ್ ಅವರು ನನಗೆ ದೊಡ್ಡ ಸಹಾಯ ಮಾಡಿದ್ದಾರೆ. ಆದರೆ ಅವರು ಸಹಾಯ ಮಾಡಿದ ವಿಚಾರವೇ ನನಗೆ ಎರಡು ವರ್ಷಗಳ ನಂತರ ತಿಳಿಯಿತು. ಯಾವುದೇ ಪ್ರಚಾರವಿಲ್ಲದೆ ಸ್ನೇಹಿತನಾಗಿ ಬೆನ್ನೆಲುಬಾಗಿ ನಿಂತ ಅವರ ಗುಣ ನಿಜಕ್ಕೂ ದೊಡ್ಡದು” ಎಂದು ಹೇಳಿದರು.

“ನಾನು ಜೀವನದಲ್ಲಿ ತಲೆಬಾಗುವುದಾದರೆ ಅದು ಕೇವಲ ಪ್ರೀತಿ ಮತ್ತು ಸ್ನೇಹಕ್ಕೆ ಮಾತ್ರ. ನನ್ನ ಉಸಿರು ಇರುವವರೆಗೂ ಈ ಎರಡಕ್ಕೂ ಬೆಲೆ ಕೊಡುತ್ತೇನೆ. ಇಂದು ಈ ವೇದಿಕೆಗೆ ಬಂದಿರುವುದೂ ಡಿ.ಕೆ. ಶಿವಕುಮಾರ್ ಮತ್ತು ಉದಯ್ ಅವರ ಮೇಲಿರುವ ಪ್ರೀತಿಯಿಂದಲೇ. ಡಿಕೆ ಶಿವಕುಮಾರ್ ಎಲ್ಲಿದ್ದರೂ ಅಲ್ಲಿ ರವಿಚಂದ್ರನ್ ಖಂಡಿತ ಇರುತ್ತಾರೆ” ಎಂದು ಹೇಳುವ ಮೂಲಕ ತಮ್ಮ ಮಾತು ಮುಗಿಸಿದರು.






