ಹುಬ್ಬಳ್ಳಿ ಧಾರವಾಡ, ಕಾರ್ಪೋರೇಷನ್ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಆಂತರಿಕ ಭಿನ್ನಮತದಲ್ಲಿ ಒದ್ದಾಡುತ್ತಿರುವಾಗ, ಆಮ್ ಆದ್ಮಿ ಸೇರಿದಂತೆ ಹಲವು ಹೊಸ ಪಕ್ಷಗಳು ಈ ಸಲ ಎಂಟ್ರಿ ನೀಡುವ ಮೂಲಕ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಕಂಡುಬಂದಿವೆ.
ಹು-ಧಾ ಪಾಲಿಕೆಯ 82 ಕ್ಷೇತ್ರಗಳಿಗೆ ನಡೆಯುತ್ತಿರುವ ಈ ಚುನಾವಣೆ ಜನರಲ್ಲಿ ರೋಚಕತೆ ಉಂಟು ಮಾಡಿದೆ. ಬಿಜೆಪಿ, ಕಾಂಗ್ರೆಸ್ ಎಲ್ಲ 82 ವಾರ್ಡ್‌ಗಳಲ್ಲಿ, ಜೆಡಿಎಸ್ 52 ರಲ್ಲಿ, ಆಮ್ ಆದ್ಮಿ 41, ಒವೈಸಿಯ ಎಐಎಂಐಎಂ 12 ಮತ್ತು ಕರ್ನಾಟಕ ರಾಷ್ಟ್ರೀಯ ಸಮಿತಿ (ಕೆಆರ್‍ಎಸ್) 4 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ.
ಬಿಜೆಪಿ 4 ಆಮ್ ಆದ್ಮಿ ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯುವಂತೆ ಆಮಿಷ ಮತ್ತು ಬೆದರಿಕೆ ಒಡ್ಡಿದ್ದು, ನಿನ್ನೆ ಬುಧವಾರ ಈ ಕುರಿತಂತೆ ಆಮ್ ಆದ್ಮಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದೆ. ಇನ್ನೊಂದು ಕಡೆ ಇಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಂಡಾಯ ಅಭ್ಯರ್ಥಿಗಳ ಮನವೊಲಿಕೆಯಲ್ಲಿ ತೊಡಗಿವೆ. ಆದರೆ yaru ಕೂಡ ನಾಮಪತ್ರ ಹಿಂಪಡೆಯುವ ಸಾಧ್ಯತೆಗಳಿಲ್ಲ.
ಬಿಜೆಪಿಯಲ್ಲಿ ಮೂರು ಬಣ
ಹುಬ್ಬಳಿ-ಧಾರವಾಡದಲ್ಲಿ ಬಿಜೆಪಿಯ ಮೂರು ಬಣಗಳು ಕಾರ್ಯಾಚರಣೆ ಮಾಡುತ್ತಿವೆ. ಜಗದೀಶ ಶೆಟ್ಟರ್ ಅವರದು ಒಂದು ಬಣ, ಶಾಸಕ ಅರವಿಂದ ಬೆಲ್ಲದ ಅವರದು ಇನ್ನೊಂದು ಬಣ ಮತ್ತು ಈಗ ಬೊಮ್ಮಾಯಿ ಸಿಎಂ ಆದ ನಂತರ ಬಿಜೆಪಿಯಲ್ಲಿರುವ ಅಂದರೆ ಮೂಲತಃ ಜೆಡಿಯುನಿಂದ ಬಂದಿರುವ ಬಣ ಈಗ ಸ್ವಲ್ಪ ಆಕ್ಟೀವ್ ಆಗಿದೆ. ಈ ಎಲ್ಲ ಬಣಗಳ ಜೊತೆಗೂ ಮತ್ತು ಕಾಂಗ್ರೆಸ್, ಜೆಡಿಎಸ್‍ಗಳೊಂದಿಗೂ ಮಿಲಾಪಿ ಮಾಡುವ ಪ್ರಹ್ಲಾದ್ ಜೋಶಿ ತಮಗೆ ನಿಷ್ಠರಾದ ಆರ್‍ಎಸ್‍ಎಸ್ ಮೂಲದವರಿಗೆ ಟಿಕೆಟ್ ಕೊಡಿಸಿದ್ದಾರೆ. ಎಬಿವಿಪಿಯ ಮಹೇಂದ್ರ ಕೌತಾಳ್, ಜಾತಿಬಾಂಧವ ಉಮೇಶ್ ಜೋಶಿ ಮತ್ತು ಮರಾಠಿಗ ಚೌಹಾಣ್ ಎನ್ನುವವರಿಗೆ ಟಿಕೆಟ್ ಕೊಡಿಸಿದ್ದಾರೆ.
ಉಳಿದಂತೆ ಜಗದೀಶ್ ಶೆಟ್ಟರ್ ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಟಿಕೆಟ್ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಹೇಶ್ ಟೆಂಗಿನಕಾಯಿ ಬಿ.ಎಲ್ ಸಂತೋಷ್ ಶಿಷ್ಯ. ಇದೆಲ್ಲದರಿಂದ ಬೊಮ್ಮಾಯಿ ಮತ್ತು ಅರವಿಂದ ಬೆಲ್ಲದ ಬಣಕ್ಕೆ ನಿರಾಸೆ ಉಂಟಾಗಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಕಥೆಯೇನು?
ಇಲ್ಲಿ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು ಸಂಘಟನೆಯಲ್ಲಿ ತುಂಬ ನಿಷ್ಕ್ರಿಯ. ತನ್ನ ಮಗನಿಗೆ ಒಂದು ಟಿಕೆಟ್ ಕೊಡಿಸಿದ್ದಾರಷ್ಟೇ. ಇದನ್ನು ಬಳಸಿಕೊಂಡ ಆರ್‍ವಿ.. ದೇಶಪಾಂಡೆ ಮತ್ತು ಧ್ರರುವನಾರಾಯಣ ನೇತೃತ್ವದ ರಾಜ್ಯ ವೀಕ್ಷಕರ ತಂಡ ಎರಡೂ ನಗರಗಳಲ್ಲಿರುವ ಏಕೈಕ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಸಲಹೆ ಮೇರೆಗೆ ಟಿಕೆಟ್ ನೀಡಿದ್ದು ಇದು ಭಿನ್ನಮತಕ್ಕೆ ಕಾರಣವಾಗಿದೆ. ಬಿಜೆಪಿಯಂತೆಯೇ ಕಾಂಗ್ರಸ್‍ನಲ್ಲೂ ಹಲಕವಾರು ಬಂಡಾಯ ಅಭ್ಯರ್ಥಿಗಳು ಹುಟ್ಟಿಕೊಂಡಿದ್ದಾರೆ.
ಬಿಜೆಪಿಯ ವಿರುದ್ಧದ ಅಸನಾಧಾನದ ಸಂಪೂರ್ಣ ಲಾಭ ಪಡೆಯುವಲ್ಲಿ ಕಾಂಗ್ರೆಸ್ ವಿಫಲಾವಾಗುತ್ತಿದೆ. ಈ ಕುರಿತು ‘ಪ್ರತಿಧ್ವನಿ’ ಜೊತೆ ಮಾತನಾಡಿರುವ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ, ‘ಭನ್ನಮತ ಇರುವುದು ನಿಜ. ಎಲ್ಲರನ್ನೂ ಮನವೊಲಿಸುತ್ತೇವೆ. ಪಕ್ಷ ಬಿಟ್ಟವರನ್ನು ವಾಪಾಸ್ ಕರೆತರುತ್ತೇವೆ’ ಎಂದರು. ಆದರೆ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಈ ಶಾಸಕ ಸಂಸದ ಪ್ರಹ್ಲಾದ್ ಜೋಶಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡೇ ಬಂದಿದ್ದಾರೆ ಎಂಬ ಆರೋಪಗಳಿವೆ. ಕಳೆದ ಸಂಸತ್ ಚುನಾವಣೆಯಲ್ಲಿ ಪ್ರಸಾದ್ ಅಬ್ಬಯ್ಯ ಬೆಂಬಲಿಗರು ಜೋಶಿ ಪರ ಕೆಲಸ ಮಾಡಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡುತ್ತಲೇ ಬಂದಿದ್ದಾರೆ.
ಆಮ್ ಆದ್ಮಿ ತಲುಪಿದ ಆಪ್
ಈ ಎಲ್ಲದರ ನಡುವೆ ಆಮ್ ಆದ್ಮಿ ಪಾರ್ಟಿ 41 ವಾರ್ಡುಗಳಲ್ಲಿ ವ್ಯವಸ್ಥಿತ ಪ್ರಚಾರ ನಡೆಸುತ್ತಿದೆ. ಕಳೆದ ಸಲ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಆಪ್ ನಾಯಕ ಸಂತೋಷ್ ನರಗುಂದ ನಮ್ಮೊಂದಿಗ ಮಾತನಾಡುತ್ತ,, ‘ಸ್ಮಾರ್ಟ್ ಸಿಟಿ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ. 2020ಕ್ಕೆ ಮುಗಿಯಬೇಕಿದ್ದ ಯೋಜನೆಯಲ್ಲಿ ಕೆಲವು ರಸ್ತೆಗಳಿಗೆ ಡಾಂಬರು ಹಾಕಿರುವುದನ್ನು ಬಿಟ್ಟರೆ ಮತ್ತೇನೂ ಆಗಿಲ್ಲ. ಕಾಂಗ್ರೆಸ್ ಇದರ ವಿರುದ್ಧ ಧ್ವನಿ ಎತ್ತಲಿಲ್ಲ. ನಾವು ಕೊರೋನಾ ಕಾಲದಲ್ಲೂ ಪ್ರತಿಭಟನೆ ಮಾಡಿ ಜನರ ಗಮನ ಸೆಳೆದಿದ್ದೆವು.. ಪಡಿತರ, ಶಾಲೆ, ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆಯ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ’ ಎನ್ನುತ್ತಾರೆ.
“ಗುಜರಾತ್‍ನ ಸೂರತ್ ಪಾಲಿಕೆಯಲ್ಲಿ 27 ಸ್ಥಾನ ಗೆಲ್ಲುವ ಮೂಲಕ ಆಪ್ ಅಲ್ಲಿ ಪ್ರಮುಖ ವಿರೋಧ ಪಕ್ಷವಾಗಿತು. ಈಗಿನ ಪಾಲಿಕೆ ಚುನಾವಣೆರಗಳಲ್ಲಿ ಅದರ ಪ್ರಯೇಗ ಮಾಡುತ್ತಿದ್ದೇವೆ. ದೆಹಲಿಯಿಂದ ಕೇಜ್ರಿವಾಲ್ ಅವರ ರಾಜಕೀಯ ಸಲಹೆಗಾರರರಾದ ರಾಣಾ ಭಾಟಿಯಾ ಮತ್ತು ರಾಜ್ಯ ಸಮಿತಿಯ ಶಾಂತಲಾ ದಾಮ್ಲೆ 15 ದಿನದಿಂದ ಇಲ್ಲೇ ಬಿಡಾರ ಹೂಡಿ ತಂತ್ರ ರೂಪಿಸುತ್ತಿದ್ದಾರೆ’’ ಎಂದು ಡಾ.ಜಾಧವ್ ಪ್ರತಿಧ್ವನಿಗೆ ತಿಳಿಸಿದ್ದಾರೆ. ‘ವಿಜಯಪುರ, ಶಿಗ್ಗಾವಿ ಮುಂತಾದ ಕಡೆಯಿಂದ ನಮ್ಮ ಕಾರ್ಯಕರ್ತರು ಇಲ್ಲಿಗೆ ಬಂದು ಪ್ರಚಾರ ಮಾಡುತ್ತಿದ್ದಾರೆ. ಇನ್ನಷ್ಟು ಕಡೆಗಳಿಂದ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಎಂದು ಡಾ, ಜಾಧವ್ ತಿಳಿಸಿದ್ದಾರೆ.
ಜೆಡಿಎಸ್ ಏಕೆ ಹಿಂದೆ?
ಇಲ್ಲಿ ಜೆಡಿಎಸ್ 52 ಅಭ್ಯರ್ಥಿಗಳನ್ನು ಹಾಕಿದೆ. ಆದರೆ ಸಂಘಟನೆ ಅಷ್ಟಕ್ಕಷ್ಟೇ. ಕಳೆದ ಸಲ ಪಾಲಿಕೆಯಲ್ಲಿ ಒಟ್ಟು 67 ಸೀಟು ಇದ್ದವು. (ಈಗ 82). ಬಿಜೆಪಿ 34ರಲ್ಲಿ ಗೆದ್ದು ಸರಳ ಬಹುಮತ ಪಡೆದಿದ್ದರೆ, ಕಾಂಗ್ರೆಸ್ 22 ಮತ್ತು ಜೆಡಿಎಸ್ 9 ಸ್ಥಾನ ಗಳಿಸಿದ್ದವು. ಇಬ್ಬರು ಪಕ್ಷೇತರರು ಗೆದ್ದಿದ್ದರು. ಜೆಡಿಎಸ್‍ನ ಮೂವರು ಬಿಜೆಪಿ ಸೇರಿ ಆಡಳಿತ ನಡೆಸಿದ್ದರು.
ಈಗ ಸಭಾಪತಿಯಾಗಿರುವ ಎಂಎಲ್‍ಸಿ ಬಸವರಾಜ ಹೊರಟ್ಟಿ ನೇರವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುವಂತಿಲ್ಲ. ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿಷೇಧದ ಷರತ್ತಿನೊಂದಿಗೆ ಜಾಮೀನು ಪಡೆದ ಕಾಂಗ್ರೆಸ್‍ನ ಮಾಜಿ ಸಚಿವ ವಿನಯ ಕುಲಕರ್ಣಿ ಕೂಡ ಪ್ರಚಾರದಲ್ಲಿ ಇಲ್ಲ.
ಹೈದರಬಾದಿನ ಒವೈಸಿಯ ಎಐಎಂಐಮ್ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ 12 ವಾರ್ಡುಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಇದು ಧಾರ್ಮಿಕತೆಯ ಆಧಾರದಲ್ಲಿ ಧ್ರುವೀಕರಣ ಮಾಡಿ ಕನಿಷ್ಠ 4-5 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಒವೈಸಿ ಪಕ್ಷದ ಸ್ಪರ್ಧೆ ಬಿಜೆಪಿಗೆ ನೆರವಾಗಬಹುದೇನೊ?
ಆದರೆ ಆಮ್ ಆದ್ಮಿ ಸ್ಪರ್ಧೆ ಬಿಜೆಪಿಯ ಮತಗಳನ್ನು ಬಾಚುವ ಸಾಧ್ಯತೆಗಳಿವೆ. ಆಪ್‍ನಿಂದ ಮಧ್ಯಮ ಮತ್ತು ಸುಶಿಕ್ಷಿತ ವರ್ಗದವರಿಗೆ ಹೆಚ್ಚಿನ ಟಿಕೆಟ್ ನೀಡಲಾಗಿದ್ದು, ಬಿಜೆಪಿ ವಿರುದ್ಧದ ಅಸಮಾಧಾನ ಆಪ್ ಪಕ್ಷಕ್ಕೆ ಕೆಲವು ಕಡೆ ವರವಾಗಲೂಬಹುದು.
ಯಡಿಯೂರಪ್ಪ ಫ್ಯಾಕ್ಟರ್
ಹು-ಧಾ, ಬೆಳಗಾವಿ ಮತ್ತು ಕಲಬುರಗಿ ಪಾಲಿಕೆ ಚುನಾವಣೆಗಳಲ್ಲಿ, ಯಡಿಯೂರಪ್ಪನವರನ್ನು ಕುತಂತ್ರದಿಂದ ಕೆಳಗಿಳಿಸಿದ್ದ್ದುಕೂಡ ಬಿಜೆಪಿಗೆ ಹಿನ್ನಡೆ ಆಗಬಹುದು ಎನ್ನಲಾಗಿದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ರಹಸ್ಯವಾಗಿ ಈ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದು ಸದ್ಯದ ಚಿತ್ರಣ. ಸೆಪ್ಟೆಂಬರ್ 3ಕ್ಕೆ ಚುನಾವಣೆ ಇದ್ದು,ಮೂರೂ ಪಾಲಿಕೆಗಳ ಚುನಾವಣಾ ಹಕೀಕತ್ ಅನ್ನು ಪ್ರತಿಧ್ವನಿ ಪ್ರಕಟಿಸಲಿದೆ.