ತುಮಕೂರು: ತುಮಕೂರಿನ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಂದು ನಸುಕಿನ ಜಾವ 12 ಮಂದಿ ಅಯ್ಯಪ್ಪ ಭಕ್ತರಿದ್ದ ಕ್ರೂಸರ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ನಡೆದಿದೆ. ಮೃತರಲ್ಲಿ ಒಬ್ಬ ಬಾಲಕಿ ಕೂಡ ಸೇರಿದ್ದು, ಅಪಘಾತದಲ್ಲಿ ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ಮೂಲದ ಸಾಕ್ಷಿ (7), ವೆಂಕಟೇಶಪ್ಪ (30), ಮಾರತಪ್ಪ (35) ಹಾಗೂ ಗವಿಸಿದ್ದಪ್ಪ (40) ಮೃತ ದುರ್ಧೈವಿಗಳಾಗಿದ್ದಾರೆ. ಪ್ರಶಾಂತ್ (32), ಪ್ರವೀಣ್ ಕುಮಾರ್ (28), ರಾಜಪ್ಪ (45), ಉಲಗಪ್ಪ (32), ರಾಕೇಶ್ (24) ತಿರುಪತಿ (33), ಶ್ರೀನಿವಾಸ್ (32) ಗಾಯಾಳುಗಳಾಗಿದ್ದಾರೆ.

ಜನವರಿ 5 ರಂದು ಶಬರಿಮಲೆಗೆ ತೆರಳಿದ್ದ ಮಾಲಾಧಾರಿಗಳು ಜ.7ರಂದು ತಲುಪಿದ್ದರು. ಬುಧವಾರ ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನ ಪಡೆದಿದ್ದ ಮಾಲಾಧಾರಿಗಳು ಗುರುವಾರ ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ತೆರಳಿದ್ದರು. ಬಳಿಕ ಮಧ್ಯಾಹ್ನ ತಮಿಳುನಾಡಿನ ಪಳನಿಯಿಂದ ಬೆಂಗಳೂರು ಕಡೆಯಿಂದ ತುಮಕೂರು ಮಾರ್ಗವಾಗಿ ಕೊಪ್ಪಳಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.







