ಬೆಂಗಳೂರು : ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಂತ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರಲ್ಲಿ ತಪ್ಪೇನಿದೆ ? ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಪರಮೇಶ್ವರ್ ಹೇಳಿರುವುದರಲ್ಲಿ ತಪ್ಪಿಲ್ಲ. ಅವರ ಬೇಡಿಕೆ ಸರಿಯಾಗಿಯೇ ಇದೆ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದ ಮತದಾರರೇ ಮುಖ್ಯವಾಗಿದ್ದಾರೆ. ಎಂಟು ವರ್ಷ ಅಧ್ಯಕ್ಷರಾಗಿ ಪರಮೇಶ್ವರ ಅವರೂ ಇದ್ರೂ, ಬಹಳಷ್ಟು ಕಾರ್ಯಕ್ರಮ ಮಾಡಿದ್ರೂ ಸರ್ಕಾರ ಬಂತೂ. ಆ ರೀತಿ ಆಗಬೇಕು ಅನ್ನೋದು ನಮ್ಮ ಭಾವನೆ. ಹೀಗಾಗಿ ಅವರಿಗೂ ಪಕ್ಷದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕೆಂಬ ಆಸೆ ಬಹಳ ದಿನಗಳಿಂದಲೂ ಇದೆ ಎನ್ನುವ ಮೂಲಕ ಜಾರಕಿಹೊಳಿ ದಲಿತ್ ಕಾರ್ಡ್ ಉರುಳಿಸಿದ್ದಾರೆ.

ಪಕ್ಷ ಅಧಿಕಾರಕ್ಕೆ ತಂದಿರುವ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕಿಯಿಸಿ, ಅವರು ಸರಿಯಾಗಿ ಹೇಳಿದಾರೆ. ಈ ಪಕ್ಷ ಅಧಿಕಾರಕ್ಕೆ ಬರಲು
ಬಹಳಷ್ಟು ಜನ ಪ್ರತ್ಯಕ್ಷವಾಗಿ ಪರೋಕ್ಷವಾಗಿ ದುಡಿದಿದ್ದಾರೆ. ಈ ಹಿಂದೆ1960ರಲ್ಲಿ ತೇನ್ ಸಿಂಗ್ ಹಿಮಾಲಯ ಪರ್ವತ ಏರಿದಾಗ ಇಡೀ ಜಗತ್ತಿನ ಎಲ್ಲಾ ಪತ್ರಿಕೆಗಳು ತೇನ್ ಸಿಂಗ್ ಹಿಮಾಲಯ ಏರಿದ್ರೂ ಅಂತಾ ಬರೆದರು. ಅವರ ಜೊತೆಗೆ ಇನ್ನೂ 14ಜನ ಇದ್ರೂ ಅವರ ಹೆಸರು ಬರಲಿಲ್ಲ. ಇದು ಹಾಗೆಯೇ ಆಗಿದೆ ಎಂದು ಉದಾಹರಣೆಯ ಮೂಲಕ ಪರೋಕ್ಷವಾಗಿ ಡಿಕೆಶಿಗೆ ಸತೀಶ್ ತಿರುಗೇಟು ನೀಡಿದ್ದಾರೆ.

ಪಕ್ಷಕ್ಕಾಗಿ ದುಡಿದವರು ಇನ್ನೂ ಬಹಳಷ್ಟು ಜನರು ಇದಾರೆ. ಆ ತೇನ್ ಸಿಂಗ್ ಜೊತೆಗೆ ಟೆಂಟ್ ಹೊರುವವರು, ಚಹಾ ಮಾಡಿದವರು ಸೇರಿ ಎಲ್ಲರೂ ಹಿಮಾಲಯ ಪರ್ವತ ಏರಿದ್ದರು. ಆದರೆ ಅವರ ಹೆಸರು ಎಲ್ಲಿಯೂ ಬರಲಿಲ್ಲ ಕೇವಲ ತೇನ್ ಸಿಂಗ್ ಹೆಸರಷ್ಟೇ ಬಂತು. ಇಲ್ಲಿಯೂ ಹಾಗೆ ಪಕ್ಷ ಬರಲು ಹದಿನಾಲ್ಕು ಇರಬಹುದು ಅಥವಾ ಎಲ್ಲಾ ಶಾಸಕರದ್ದು ಅವರದೇ ಆದ ಕೊಡುಗೆ ಇದೆ. ಸರ್ಕಾರ ಬರಲು ಅವರದೇ ಸ್ವಂತ ಎಪರ್ಟ್ ಇದೆ. ಸ್ವಾಭಾವಿಕವಾಗಿ ಎಲ್ಲರೂ ಕ್ಲೈಮ್ ಮಾಡೋರೆ. ಎಂದು ಹೇಳಿದ್ದಾರೆ.
ಕೆಲವೇ ಜನರಿಂದ ಅಧಿಕಾರ ಬಂದಿದೆ ಅನ್ನೋದನ್ನು ನಾನು ಕೂಡ ಒಪ್ಪುವುದಿಲ್ಲ. ಒಂದು ಕೋಟಿಗೂ ಅಧಿಕ ಜನ ನಮಗೆ ವೋಟ್ ಹಾಕಿದ್ದಾರೆ. ಹೀಗಾಗಿ ಶಾಸಕರು, ಸಚಿವರು ನಮ್ಮ ಇತಿಮಿತಿಯಲ್ಲಿರಬೇಕು ಎಲ್ಲಾ ನನ್ನಿಂದ ಆಗಿದೆ ಅನ್ನೋದು ತಪ್ಪು. ಇದೆಲ್ಲಾ ನಮ್ಮ ಗಮನಕ್ಕೆ ಇರಬೇಕು ಎಂದು ಚಾಟಿ ಬೀಸಿದ್ದಾರೆ.

ಈಗ ನಮ್ಮ ಶಾಸಕರು ಸಹ ತಮ್ಮದೇ ಆದ ಕಷ್ಟದಲ್ಲಿ ಇದ್ದಾರೆ. ಮೊದಲು ಆಯ್ಕೆಯಾದವರು ಸೇರಿದಂತೆ, ಪಕ್ಷದ ಜೊತೆಗೆ ಶಾಸಕರ ಶ್ರಮ, ಕಾರ್ಯಕರ್ತರ ಶ್ರಮದಿಂದ ಸರ್ಕಾರ ಬಂದಿದೆ ಅನ್ನೋದು ಗಮನಿಸಬೇಕು. ಎಲ್ಲರಿಗೂ ಅಷ್ಟೇ ಪ್ರಾಮುಖ್ಯತೆ ಸಿಗಬೇಕು ಅನ್ನೋದು ನಮ್ಮ ಉದ್ದೇಶ. ಮುಖ್ಯಮಂತ್ರಿಯನ್ನು ಮಾಡೋದು ಬಿಡೋದು ಹೈಕಮಾಂಡ್ ಕೈಯಲ್ಲಿದೆ. ಒನ್‌ಮ್ಯಾನ್ ಬಗ್ಗೆ ಹೇಳಲು ಹೋಗುವುದಿಲ್ಲ, ಆದರೆ ಪಕ್ಷ ಬರಲು ಎಲ್ಲರ ಸಹಕಾರ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.






