ಆನೆಗುಡ್ಡೆ ಶ್ರೀವಿನಾಯಕನ ಸನ್ನಿಧಿಯಲ್ಲಿ ‘ವೀರ ಚಂದ್ರಹಾಸ’ (Veera Chandrahasa) ಟ್ರೇಲರ್ ಅನಾವರಣ.

ಕೆ.ಜಿ.ಎಫ್(KGF), ಸಲಾರ್(Salar), ಭೈರತಿ ರಣಗಲ್(Byrathi Ranagal), ಉಗ್ರಂ (Ugram) ನಂಥಹ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜಿಸುವ ಮೂಲಕ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರವಿ ಬಸ್ರೂರು, ಈಗ ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯ ಹಿರಿಮೆಯನ್ನು ಜಗತ್ತಿಗೆ ಹೇಳಲು ಹೊರಟಿದ್ದಾರೆ, ಯಕ್ಷಗಾನ ಪ್ರಸಂಗ ಆಧಾರಿತ “ವೀರ ಚಂದ್ರಹಾಸ” ಎಂಬ ಚಿತ್ರವನ್ನು ಅವರು ನಿರ್ದೇಶಿಸಿದ್ದು, ಆ ಚಿತ್ರ ಇದೇ ತಿಂಗಳ 18 ರಂದು ಬಿಡುಗಡೆಯಾಗುತ್ತಿದೆ.
ಎಸ್ ಎಸ್ ರಾಜಕುಮಾರ್ (S S Rajkumar)ನಿರ್ಮಾಣದ, ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಅರ್ಪಿಸುತ್ತಿರುವ ಈ ಚಿತ್ರದ ಮೂಲಕ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ, ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವನ್ನು ಬೆಳ್ಳಿ ಪರದೆಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಯಕ್ಷಗಾನ ಕಲಾವಿದರನ್ನು ಗೌರವಿಸುವ ಸಮಾರಂಭ ಕುಂದಾಪುರದ ಆನೆಗುಡ್ಡೆ ಶ್ರೀವಿನಾಯಕನ ಸನ್ನಿಧಿಯಲ್ಲಿ ನಡೆಯಿತು.

ವೇದಿಕೆಯಲ್ಲಿ ನಿರ್ದೇಶಕ ರವಿ ಬಸ್ರೂರ್ ಮಾತನಾಡುತ್ತಾ, ಇದು ನನ್ನ ಸುಮಾರು ವರ್ಷಗಳ ಕನಸು. ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಚಿತ್ರ ಮಾಡಲು ಹೊರಟಾಗ ನಾಗರಾಜ್ ನೈಕಂಬ್ಳಿ, ನವೀನ್ ಶೆಟ್ಟಿ ಅವರುಗಳು ನನ್ನ ಬೆನ್ನಿಗೆ ನಿಂತರು. ಚಂದ್ರಹಾಸನಾಗಿ ಶಿತಿಲ್ ಶೆಟ್ಟಿ, ದುಷ್ಟಬುದ್ದಿಯಾಗಿ ಪ್ರಸನ್ನ ಶೆಟ್ಟಿಗಾರ್ ಅಲ್ಲದೆ ಪ್ರತಿಯೊಬ್ಬರೂ ಚಿತ್ರಕ್ಕಾಗಿ ಕೊಟ್ಟ ಡೆಡಿಕೇಶನ್ ದೊಡ್ಡದು. ಚಿತ್ರದ ಎಲ್ಲಾ ಪಾತ್ರಗಳನ್ನು ನಿಜವಾದ ಯಕ್ಷಗಾನ ಕಲಾವಿದರೇ ಮಾಡಿದ್ದಾರೆ. ಹಿಂದೆಂದೂ ನೋಡಿರದ ಅದ್ಭುತವಾದ
ಸಾಹಿತ್ಯ ಚಿತ್ರದಲ್ಲಿದ್ದು, ಹಿನ್ನೆಲೆ ಸಂಗೀತಕ್ಕಾಗಿ 600 ರಿಂದ 700 ಮ್ಯೂಸಿಕ್ ಟ್ರ್ಯಾಕ್ಸ್ ಬಳಸಿದ್ದೇವೆ.
400 ರಿಂದ 500 ಯಕ್ಷಗಾನ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಲಾನಿರ್ದೇಶಕ ಪ್ರಭು ಬಡಿಗೇರ್ ನಮ್ಮ ಕಲ್ಪನೆಗೂ ಮೀರಿ ಕಲಾ ನಿರ್ದೇಶನ ಮಾಡಿಕೊಟ್ಟರು. ವಿಶೇಷವಾಗಿ ಸಿನಿಮಾದಲ್ಲಿ ಸೆಟ್ ಲೈಟ್ ಬಳಸದೆ, ನೈಜ ಬೆಳಕಲ್ಲೇ ಶೂಟ್ ಮಾಡಿದ್ದೇವೆ. 8 ರಿಂದ 10 ಕೋಟಿ ಬಜೆಟ್ ನಲ್ಲಿ ಹೆಬ್ಬಾಳದ ಬಳಿ ಒಂದು ಗ್ರೌಂಡ್ ನಲ್ಲಿ ಬೇರೆ ಬೇರೆ ಸೆಟ್ ಹಾಕಿ 35 ರಿಂದ 40 ದಿನ ಶೂಟ್ ಮಾಡಿದ್ದೇವೆ ಎಂದು ವಿವರಿಸಿದರು.
ನಾಗರಾಜ್ ನೈಕಂಬ್ಳಿ ಮಾತನಾಡಿ ಜೈಮಿನಿ ಭಾರತದ ಒಂದು ಭಾಗವಾದ ವೀರ ಚಂದ್ರಹಾಸನ ಕಥೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಂಡು ಕಲೆಯನ್ನು ರವಿ ಬಸ್ರೂರ್ ತೆರೆಮೇಲೆ ತೋರಿಸುತ್ತಿದ್ದಾರೆ. ಕೆಲ ಸೋಷಿಯಲ್ ಮೀಡಿಯಾಗಳಲ್ಲಿ ಈ ಕಲೆಯ ಬಗ್ಗೆ ಅವಹೇಳನಕಾರಿಯಾಗಿ ತೋರಿಸಲಾಗುತ್ತಿದೆ. ಈ ಚಿತ್ರವನ್ನು ಶಕ್ತಿಯಿಂದ ಮಾಡಿಲ್ಲ, ಭಕ್ತಿಯಿಂದ ಮಾಡಿದ್ದೇವೆ ಎಂದರು.

ಚಂದ್ರಹಾಸನ ಪಾತ್ರಧಾರಿ ಶಿಥಿಲ್ ಶೆಟ್ಟಿ ಮಾತನಾಡಿ ಕೇವಲ ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ನಮ್ಮ ಯಕ್ಷಗಾನ ಕಲೆಯನ್ನು ವಿಶ್ವಮಾನ್ಯ ಮಾಡಬೇಕೆಂದು ರವಿ ಬಸ್ರೂರ್ ಅವರು ಈ ಸಿನಿಮಾ ಮಾಡಿದ್ದಾರೆ. ಪ್ರತಿಭೆ ಇರುವವರಿಗೆ ಕರೆದು ಅವಕಾಶ ನೀಡಿದ್ದಾರಲ್ಲದೆ, ಎಲ್ಲಿಯೂ ಲೋಪವಾಗದ ಹಾಗೆ ಸಿನಿಮಾ ನಿರ್ದೇಶಿಸಿದ್ದಾರೆ. ಅವರು ಸ್ಥಳದಲ್ಲೇ ಸನ್ನಿವೇಶವನ್ನು ವಿವರಿಸುತ್ತಿದ್ದರು. ಸಿನಿಮಾಗಾಗಿ ಅವರ ಡೆಡಿಕೇಶನ್ ದೊಡ್ಡದು. ನಾವೆಲ್ಲ ಕುದುರೆ ಸವಾರಿ ಕಲಿತು ಅಭಿನಯಿಸಿದ್ದೇವೆ. ಯಕ್ಷಗಾನ ವಿಶ್ವಗಾನ ಆಗಬೇಕು ಎಂದು ಹೇಳ್ತಾರಷ್ಟೇ. ಆದರೆ ಅದನ್ನು ರವಿ ಬಸ್ರೂರು ಕಾರ್ಯಗತ ಮಾಡಿ ತೋರಿಸಿದ್ದಾರೆ ಎಂದರು.
ದುಷ್ಟಬುದ್ದಿ ಪಾತ್ರಧಾರಿ ಪ್ರಸನ್ನ ಶೆಟ್ಟಿಗಾರ್ ಮಾತನಾಡುತ್ತ, ರವಿ ಬಸ್ರೂರ್ 12 ವರ್ಷಗಳ ಹಿಂದಿನ ಕನಸನ್ನು ನನಸು ಮಾಡಿದ್ದಾರೆ. ದುಷ್ಟಬುದ್ದಿ ಪಾತ್ರ ಮಾಡಿ ಖ್ಯಾತರಾದವರನ್ನು ಬಿಟ್ಟು ನನ್ನ ಕೈಲಿ ಅದನ್ನು ಮಾಡಿಸಿದ್ದಾರೆ. ಅವರಲ್ಲಿ ಬೆಳಗ್ಗೆ ಇರೋ ಉತ್ಸಾಹವೇ ಸಂಜೆ 6 ಗಂಟೆಗೂ ಇರುತ್ತಿತ್ತು. ಇದು ಯಕ್ಷಗಾನಕ್ಕೆ ಸಿಕ್ಕಂಥ ದೊಡ್ಡ ಬೆಳವಣಿಗೆ ಎಂದರು.

ಸಾಹಿತಿ ಪ್ರಮೋದ್ ಮೊಗಬೆಟ್ಟು ಮಾತನಾಡಿ ಇದರಲ್ಲಿ ನಾನು 60 ರಿಂದ 70 ಹಾಡುಗಳನ್ನು ಬರೆದಿದ್ದೇನೆ. ಬೆಳ್ಳಿತೆರೆಯಲ್ಲಿ ಇಂಥಹ ಅದ್ಭುತ ಬೆಳವಣಿಗೆ ಆಗುತ್ತೆ ಅಂತ ನಾವ್ಯಾರೂ ಊಹಿಸಿರಲಿಲ್ಲ. ಅದನ್ನು ನಮ್ಮವರೇ ಆದ ರವಿ ಬಸ್ರೂರ್ ಮಾಡಿದ್ದಾರೆ. ಪ್ರಾಚೀನ ಕಲೆ ಯಕ್ಷಗಾನಕ್ಕೆ ಸಿಕ್ಕಂಥ ಗೌರವ ಇದು. ಯಕ್ಷಗಾನ ಕಲಾವಿದರು ಮಾಡಬೇಕಿದ್ದ ಕೆಲಸವನ್ನು ರವಿ ಅವರು ಮಾಡಿದ್ದಾರೆ. ಯಕ್ಷಗಾನ ಕಲಾವಿದರ ಪ್ರತಿಭೆಯನ್ನು ಅವರು ಹೊರತಂದಿದ್ದಾರೆ ಎಂದರು.
ಒಂದೇ ಸಿನಿಮಾಕ್ಕಾಗಿ ಇಷ್ಟೊಂದು ಹಾಡುಗಳನ್ನು ಯಾರೂ ಬರೆದಿದ್ದಿಲ್ಲ. ಇದನ್ನು ಗಿನ್ನಸ್ ದಾಖಲೆಗೆ ಕಳುಹಿಸುತ್ತಿದ್ದೇವೆ ಎಂದೂ ಹೇಳಿದ ರವಿ ಬಸ್ರೂರ್(Ravi Basrur), ಶಿವರಾಜಕುಮಾರ್ (Shivarajkumar) ಅವರ ಪಾತ್ರದ ಬಗ್ಗೆ ಮಾತನಾಡುತ್ತ ವೀರಕಾಳಗದ ವಿಜೇತರಿಗೆ ಪ್ರಶಸ್ತಿ ನೀಡುವ, ವಿಶ್ಯುಯಲಿ ಟ್ರೀಟ್ ಕೊಡುವಂಥ ಪಾತ್ರವದು. ಅನಾರೋಗ್ಯವಿದ್ದರೂ, ಹೇಳಿದ ಸಮಯಕ್ಕೆ ಸರಿಯಾಗಿ ಬಂದು ಮುಗಿಸಿಕೊಟ್ಟರು. ಹೆಬ್ಬಾಳದ ಸೆಟ್ ನಲ್ಲಿ ನಮ್ಮ ಜತೆ ಸಂಜೆವರೆಗೂ ಇದ್ದರು. ನಾನು ಒಂದು ಹೆಜ್ಜೆ ಇಟ್ಟಿದ್ದಕ್ಕೆ ಈ ಥರದ ಸಪೋರ್ಟ್ ಸಿಗುತ್ತೆ ಅಂದುಕೊಂಡಿರಲಿಲ್ಲ. ಚಂದನ್ ಶೆಟ್ಟಿ(Chandan Shetty), ಪುನೀತ್(Punith), ಗರುಡರಾಮ್ (garudaram)ಅವರ ಪಾತ್ರಗಳು ಪ್ರಮುಖ ಘಟ್ಟದಲ್ಲಿ ಬರುತ್ತವೆ. ಮೊದಲಬಾರಿಗೆ ಯಕ್ಷಗಾನ ಕಥೆಯೊಂದು ತೆರೆಗೆ ಬರುತ್ತಿದ್ದು ಹೊಂಬಾಳೆ ಫಿಲಂಸ್ ಸಂಸ್ಥೆ ನಮ್ಮ ಜೊತೆಗೆ ನಿಂತಿದ್ದು. 50ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಏಪ್ರಿಲ್ 18ರಂದು ಬಿಡುಗಡೆಯಾಗುತ್ತಿದೆ. ನಮ್ಮ ಯಕ್ಷಗಾನ ಕಲೆ ಗೋದಾವರಿ ಕಡೆ ಹೋಲಿಕೆಯಿದೆ ಎಂದು ತೆಲುಗು ನಿರ್ಮಾಪಕರೊಬ್ಬರು ತೆಲುಗು ರೈಟ್ಸ್ ಪಡೆದುಕೊಂಡಿದ್ದಾರೆ. ಚಿತ್ರದ ಅವಧಿ 2 ಗಂಟೆ 36 ನಿಮಿಷ ಇದೆ. ಹಾಡುಗಳು ಬಿಟ್ ಥರ ಇರುತ್ತದೆ. ಎಲ್ಲಾ ಸರ್ಕಾರಿ ಶಾಲೆ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲು ಅವಕಾಶ ಕೊಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇವೆ. ಜನರಿಗೆ ತಲುಪಿಸಲು ಹೊಂಬಾಳೆ ಸಂಸ್ಥೆ (Hombale Movies) ದೊಡ್ಡ ಮಟ್ಟದ ಸಹಕಾರ ನೀಡಿದೆ ಎಂದರು.