ನೆಹರು ಕಾಲದಿಂದಲೂ ಹಿಂದಿ ಭಾಷೆ ಹೇರಿಕೆ ಮಾಡುವ ಕಾರ್ಯ ಆರಂಭವಾಯಿತು ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.
ಮೈಸೂರಿನ ಪತ್ರಕರ್ತರ ಸಂಘದಲ್ಲಿ ಮಂಗಳವಾರ (ಸೆಪ್ಟೆಂಬರ್ 11) ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಅಂದಿನಿಂದಲೂ ಹಿಂದಿಯನ್ನು ರಾಷ್ಟ್ರೀಯ ಭಾಷೆ ಮಾಡಲು ಯತ್ನಿಸಲಾಗುತ್ತಿದೆ. ಇಂದಿಗೂ ಕೂಡ ಹಿಂದಿ ಭಾಷೆಯನ್ನು ಹೇರಿಕೆ ಮಾಡಲಾಗುತ್ತಿದೆ. ನನಗೆ ಕನ್ನಡ ಒಂದಂಶ ಆಗಬೇಕು ಎಂಬ ಇರಾದೆಯಿದೆ. ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಗಬೇಕು. ಕನ್ನಡಕ್ಕಾಗಿ ಕಾವಲಿಟ್ಟು, ಕನ್ನಡವನ್ನು ರಕ್ಷಿಸಬೇಕು. ಹಿಂದಿ ಹೇರಿಕೆ ಇಂದಿನಿಂದ ಇಲ್ಲ, ನಾನು 8 ನೇ ತರಗತಿ ಓದುತ್ತಿದ್ದ ಸಮಯದಿಂದಲೂ ಇದೆ. ದೆಹಲಿಗೆ ಕನ್ನಡ ಬೇಕಾಗಿಲ್ಲ, ನಮಗೆ ಹಿಂದಿ ಬೇಕಾಗಿಲ್ಲ. ಆದರೆ ನಮಗೆ ದೆಹಲಿ ಬೇಕಾಗಿದೆ. ಹಿಂದಿ ಹೇರುವ ಹುನ್ನಾರ ಹಿಂದಿನ ಕಾಲದಿಂದಲೂ ಕೂಡ ಇದೆ. ಈಗ ಅದು ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿ, ಕೆಲವರು ಇದನ್ನು ಕಾವ್ಯಕ್ಕೆ ಸಿಕ್ಕ ಗೌರವ ಅಂದ್ರು. ಸೋಷಿಯಲ್ ಜಸ್ಟಿಸ್ ಅಂತ ಕೆಲವರು ಹೇಳಿದ್ರು. ಅದ್ಯಾವುದನ್ನೂ ವ್ಯಾಖ್ಯಾನಿಸಲು ಕಷ್ಟ. ನಾನು ಸಿನಿಮಾ ರೈಟರ್. ನನ್ನನ್ನು ಕವಿ ಅಂದರೆ, ಕವಿ ಪಟ್ಟ ಬೇಡ ಅಂತೀನಿ. ಕವಿ ಪಟ್ಟ ತೆಗೆದುಕೊಂಡರೆ ಮೇಲು, ಮಧ್ಯ, ಕೆಳಗೆ ಅಂತ ಮೂರು ಭಾಗ ಮಾಡುತ್ತಾರೆ. ದಸರಾ ಉದ್ಘಾಟನೆ ಮಾಡುವ ಭಾಗ್ಯ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯ ಅಂತ ಹೇಳುತ್ತೇನೆ. ಸಾಮಾಜಿಕ ನ್ಯಾಯವು ಅಲ್ಲ, ಕಾವ್ಯಕ್ಕೆ ಸಿಕ್ಕ ನ್ಯಾಯ ಅಂತಲೂ ಹೇಳುವುದಿಲ್ಲ ಎಂದು ಹಂಸಲೇಖ ಹೇಳಿದರು.
ಬರದ ನಡುವೆ ಅದ್ದೂರಿ ದಸರಾ ಆಚರಣೆ ವಿಚಾರ ಪ್ರಶ್ನೆಗೆ, ರೈತರ ವಿಚಾರವನ್ನೂ ಗಮನಿಸಬೇಕು. ಹಬ್ಬದ ಮೂಲವೇ ರೈತ. ಅದರ ಬಗ್ಗೆ ನನ್ನ ಚಿಂತೆ ಜಾಸ್ತಿ ಇದೆ. ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಬೇಕು ಎಂಬುದು ನನ್ನ ಆಸೆ. ರೈತರ ಮನಸ್ಸಿಗೆ ನೋವಾಗುವ ದುಂದು ಬೇಡ ಅನ್ನೋದು ನನ್ನ ಭಾವನೆ. ಸ್ಮಾರ್ಟ್ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಆಗಬೇಕಿದೆ. ಕೃಷಿ ತಜ್ಞರ ಸಹಾಯದಿಂದ ಸ್ಮಾರ್ಟ್ ವಿಲೇಜ್ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮೊದಲು ತಾಯಿ ಮಕ್ಕಳಿಗೆ ಕನ್ನಡದ ಬಗ್ಗೆ ಹೇಳಿಕೊಡಬೇಕು. ಇತ್ತೀಚೆಗೆ ಮಕ್ಕಳನ್ನು ಇಂಗ್ಲಿಷ್ ನಲ್ಲೇ ಓದಿಸಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಕೆಲಸ ಸಿಗೋದು ಸಹ ಇಂಗ್ಲಿಷ್ ಇದ್ದರೆ ಮಾತ್ರ. ಹಾಗಾಗಿ ಮನೆಯಲ್ಲೂ ಇಂಗ್ಲಿಷ್ ಕಲಿಸುವ ಹಂತಕ್ಕೆ ಹೋಗಿದ್ದಾರೆ. ಇಂಗ್ಲಿಷ್ ಕೆಲಸಕ್ಕೆ ಇಟ್ಟುಕೊಳ್ಳಿ, ಕನ್ನಡದ ಅಸ್ಮಿತೆ ಉಳಿಸಲು ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ ಆಗಬೇಕು. ಈ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಹಿಷ ದಸರಾ ಆಚರಣೆ ಕುರಿತ ಪ್ರಶ್ನೆಗೆ, ಅಕಪಕ್ಕದ ಮನೆಯ ವಿಚಾರ ನನಗೆ ಏಕೆ.? ನನ್ನನ್ನು ಕರೆದಿರೋದು ದಸರಾ ಉದ್ಘಾಟನೆಗೆ. ಅದು ಬಿಟ್ಟು ಬೇರೆ ವಿಚಾರಗಳ ಬಗ್ಗೆ ಚರ್ಚೆ ಬೇಡ. ಮಹಿಷ ದಸರಾ ಉದ್ಘಾಟನೆಗೆ ನನ್ನನ್ನು ಏಕೆ ಕರೆಯುತ್ತಾರೆ. ನಾನು ಈಗಾಗಲೇ ನಾಡಹಬ್ಬ ದಸರಾ ಉದ್ಘಾಟಕನಾಗಿದ್ದೇನೆ. ಎರಡು ಕಾರ್ಯಕ್ರಮ ಒಬ್ಬನೇ ಉದ್ಘಾಟಿಸಲು ಹೇಗೆ ಸಾಧ್ಯ ಎಂದರು.