ಹಿಜಾಬ್, ಕೇಸರಿ ಶಾಲು ಗಲಾಟೆಯಿಂದ ಹದಗೆಟ್ಟಿರುವ ಶಾಂತಿ ಸುವ್ಯವಸ್ಥೆ, ಕಂಗೆಟ್ಟಿರುವ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸೋಮವಾರ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದೆ. ಕಾಕತಾಳೀಯ ಎಂಬಂತೆ ಇಂದು ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಹಿಜಾಬ್ ಕುರಿತ ನ್ಯಾಯಾಲಯದ ತೀರ್ಪಿನ ಬಗ್ಗೆ ನಗರದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಮಕ್ಕಳ ಶಿಕ್ಷಣ ಬಹಳ ಮುಖ್ಯ. ಅನುಮಾನವೇ ಇಲ್ಲ. ಆದರೆ, ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲನೆ ಮಾಡಬೇಕಾದ್ದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸರಕಾರ ಮಕ್ಕಳ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಹಾಗೂ ಹಳಿತಪ್ಪಿಸುವ ಶಿಕ್ಷಣ ವ್ಯವಸ್ಥೆಯನ್ನು ಸರಿ ಮಾಡಿ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು ಮಾಡಬೇಕು ಎಂದು ಅವರು ಒತ್ತಾಯ ಮಾಡಿದರು.
ವಿಧಾನೌಧದ ಬಳಿ ಮಾಧ್ಯಮಗಳಿಗೆ ತೀರ್ಪಿನ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು; ಶಾಲಾ ಕಾಲೇಜುಗಳಲ್ಲಿ ಅಹಿತಕರ ವಾತಾವರಣ ಇತ್ತು. ಸಮವಸ್ತ್ರದ ಕಾರಣಕ್ಕೆ ಸಮಾಜದಲ್ಲಿ ಅಶಾಂತಿ ಉಂಟಾಗಿತ್ತು. ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು. ಇದನ್ನು ಸರಿದಾರಿಗೆ ತರುವ ಉದ್ದೇಶದಿಂದ ನಿಲುವಳಿ ಮಂಡಿಸಿದ್ದೇನೆ. ಸದನದಲ್ಲಿ ಈ ಬಗ್ಗೆ ನಾಳೆ ಚರ್ಚೆ ಮಾಡುತ್ತೇನೆ. ಸಭಾಧ್ಯಕ್ಷರು ಅವಕಾಶ ನೀಡುತ್ತಾರೆಂದು ನಂಬಿದ್ದೇನೆ ಎಂದರು.
ಹಿಂಸಾಚಾರ ಮತ್ತು ಗಲಾಟೆಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಆತಂಕದ ಪರಿಸ್ಥಿತಿ ಇದೆ. ಇದೆಲ್ಲವೂ ಸರಿ ಹೋಗಬೇಕಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನವರೂ ಕಾನೂನು ಹದಗೆಟ್ಟಿರುವ ಬಗ್ಗೆ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸುತ್ತಾರೆ ಎಂಬ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿದೆ. ಮಂಡಿಸಲಿ, ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿ. ನನ್ನದೇನೂ ತಕರಾರಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.