2002ರಲ್ಲಿ ಗುಜರಾತ್ ಗೋಧ್ರಾ ಗಲಭೆ ಪ್ರಕರಣದಲ್ಲಿ ಗುಜರಾತಿನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಎಸ್‌ಐಟಿ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅ. 26ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ.
ಕಾಂಗ್ರೆಸ್ ನಾಯಕ, ಮಾಜಿ ಸಂಸದ ದಿವಂಗತ ಎಹಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರು ಎಸ್‌ಐಟಿ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆಯಲ್ಲಿ ಯಾವುದೇ ಮುಂದೂಡಿಕೆಗಳನ್ನು ಸ್ವೀಕರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಂ. ಖಾನ್‌ವಿಲ್ಕರ್, ದಿನೇಶ್ ಮಾಹೇಶ್ವರಿ ಹಾಗೂ ಸಿ.ಟಿ. ರವಿಕುಮಾರ್ ಅವರನ್ನೊಳ ಗೊಂಡ ತ್ರಿಸದಸ್ಯ ನ್ಯಾಯಪೀಠವು, ‘ಅರ್ಜಿದಾರರ ವಿನಂತಿಯ ಮೇರೆಗೆ ವಿಚಾರಣೆಯನ್ನು ಅ. 26ಕ್ಕೆ ಮುಂದೂಡಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಅರ್ಜಿಯ ವಿಚಾರಣೆಯ ದಿನಾಂಕವನ್ನು ಮುಂದೂಡುವ ಮನವಿಯನ್ನು ಪರಿಗಣಿಸಲಾಗದು’ ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಅರ್ಜಿಗೆ ಸಂಬಂಧಿಸಿದಂತೆ ಸುಮಾರು 23 ಸಾವಿರ ಪುಟಗಳಷ್ಟು ದಾಖಲೆ ಲಭ್ಯವಾಗಿದ್ದು, ಈ ಮಾಹಿತಿಯನ್ನು ಸೇರಿಸುವ ಸಲುವಾಗಿ ಅರ್ಜಿಯ ವಿಚಾರಣೆ ಮುಂದೂಡಲು ಮನವಿ ಸಲ್ಲಿಸಲಾಗಿತ್ತು’ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇದೇ ಕಾರಣಕ್ಕಾಗಿ ಪ್ರಕರಣವನ್ನು ಸುಮಾರು ಒಂದೂವರೆ ವರ್ಷಗಳ ಕಾಲ ಮುಂದೂಡಲಾಗಿದೆ ಹಾಗಾಗಿ ಅದನ್ನು ಮತ್ತೆ ಮುಂದೂಡಬಾರದು ಎಂದು ವಾದ ಮಾಡಿದ್ದರು.
2012ರಲ್ಲಿ ‘ಗಲಭೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಾಗೂ ಇತರ 63 ಹಿರಿಯ ಅಧಿಕಾರಿಗಳ ವಿರುದ್ಧ ಯಾವುದೇ ಪುರಾವೆಗಳಿಲ್ಲ’ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ ಚಿಟ್ ನೀಡಿತ್ತು.