ಚನ್ನಪಟ್ಟಣ/ರಾಮನಗರ:ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆಯನ್ನು ದಿವಾಳಿ ಎಬ್ಬಿಸಿದೆ.ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಹಣವಿಲ್ಲ, ಆದರೆ ಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸಿದ ಅವರು; ಕಾಂಗ್ರೆಸ್ ಸರಕಾರ ಅಪರಿಮಿತವಾಗಿ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ.ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು ಕೂಡ ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಈ ಸರಕಾರ ದಿವಾಳಿಯಾಗಿದೆ. ಚುನಾವಣೆ ಮುಗಿದ ಮೇಲೆ ಹಣ ಜಮೆ ಮಾಡುವುದನ್ನು ಮತ್ತೆ ನಿಲ್ಲಿಸುತ್ತಾರೆ. ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಕಸಿದುಕೊಂಡು ಹೋಗಿದ್ದಾರೆ.ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚೋಕೆ ಕಾಸಿಲ್ಲ, ಜನ ಉಗಿಯುತ್ತಿದ್ದಾರೆ ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಚನ್ನಪಟ್ಟಣಕ್ಕೆ ಯಾರು ಭಗೀರಥ? ನಿಖಿಲ್ ಅವರನ್ನು ವಿಧಾನಸೌಧಕ್ಕೆ ಕಳಿಸಿ.ಆ ಹುಡುಗ ನಿಮ್ಮ ಪರವಾಗಿ ದನಿ ಎತ್ತುತ್ತಾನೆ. ಇದರಲ್ಲಿ ನಿಮಗೆ ಯಾವುದೇ ಸಂಶಯ ಬೇಡ ಎಂದ ಅವರು; ನಾನು ಒಬ್ಬ ರೈತನ ಮಗ, ನೀವು ರೈತನ ಮಕ್ಕಳು. ಇಗ್ಗಲೂರು ಅಣೆಕಟ್ಟು ಕಟ್ಟಿಸಿದ್ದು ಈ ದೇವೇಗೌಡ, ಬದುಕಿದ್ದಾನೆ. ಹದಿನೇಳು ಕೆರಗಳಿಗೆ ನೀರು ಹರಿಸಿದ್ದ ವ್ಯಕ್ತಿಯನ್ನು ಭಗೀರಥ ಅಂತಾರೆ. ಈ ಅಣೆಕಟ್ಟು ಕಟ್ಟಿಲ್ಲ ಅಂದರೆ ನೀರು ಹರಿಸೋಕೆ ಸಾಧ್ಯ ಆಗುತ್ತಿತ್ತಾ? ಎಂದು ಜನತೆಯಲ್ಲಿ ಕೇಳಿದರು ಮಾಜಿ ಪ್ರಧಾನಿಗಳು.
ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು 1600 ಕೋಟಿಯಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈಗಿರುವ ಸರ್ಕಾರ ಸಣ್ಣಪುಟ್ಟ ಕೆಲಸ ಮಾಡುತ್ತಿದೆ. ಪ್ರತಿಗ್ರಾಮಕ್ಕೆ ನೀರಾವರಿ ಸೌಲಭ್ಯ ಕೋಡಬೇಕಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಇಷ್ಟು ಹಣವನ್ನು ಕ್ಷೇತ್ರಕ್ಕೆ ಕೊಟ್ಟರು.ರಾಷ್ಟ್ರದ ಹಿತದೃಷ್ಟಿಯಿಂದ, ಮೋದಿ ಅವರ ಒತ್ತಾಸೆಯಿಂದ ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ಸಚಿವರಾಗಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಯಿಂದ ಅಭ್ಯರ್ಥಿಯನ್ನು ಹೈಜಾಕ್ ಮಾಡಿದ್ದಾರೆ:ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟ ಮೇಲೆ ಯಾರು ಅಭ್ಯರ್ಥಿಯಾಗಿ ನಿಲ್ಲಬೇಕು ಎಂದು ಚರ್ಚೆ ನಡೆಯಿತು. ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡಿದರು.ಹಾಗಂತ ಎಲ್ಲರನ್ನೂ ನಂಬಿಸಿದರು. ನಾಮಪತ್ರ ಸಲ್ಲಿಸುವ ಒಂದು ದಿನಕ್ಕೆ ಮೊದಲು ಇದ್ದಕ್ಕಿದ್ದ ಹಾಗೆ ತಮ್ಮ ತೀರ್ಮಾನ ಬದಲಾಯಿಸಿ ಮತ್ತೊಬ್ಬ ಸ್ನೇಹಿತರನ್ನು ನಿಲ್ಲಿಸಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿಯನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ಅವರು ಟೀಕಿಸಿದರು.
ನಿಖಿಲ್ ಕುಮಾರಸ್ವಾಮಿ ಅವರು 2028ಕ್ಕೆ ಸ್ಪರ್ಧೆ ಮಾಡುತ್ತೇನೆ, ನಾನು ಪಕ್ಷ ಕಟ್ಟುತ್ತೇನೆ ಎಂದರು. ನಾಮಪತ್ರ ಸಲ್ಲಿಸುವ ಹಿಂದಿನ ದಿನ ಪ್ರಧಾನಿ ನರೇಂದ್ರ ಮೋದಿ, ನಡ್ಡಾ, ಅಮಿಶ್ ಶಾ ಅವರೆಲ್ಲರೂ ಸೇರಿ ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಲು ತೀರ್ಮಾನ ಮಾಡಿದರು. ಈ ಯುವಕ ನಿಮ್ಮ ಮೊಮ್ಮಗನಿದ್ದ ಹಾಗೆ,ವಿಧಾನಸಭೆಗೆ ಆಯ್ಕೆ ಮಾಡಿ ಆಶೀರ್ವಾದ ಮಾಡಿ. ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ.ನಮ್ಮ ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ನಿಖಿಲ್ ಕುಮಾರಸ್ವಾಮಿ ವಿಧಾನಸೌಧಕ್ಕೆ ಹೋಗುವುದು 100ಕ್ಕೆ 100 ಸತ್ಯ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಶಾಸಕರಾದ ಸಮೃದ್ಧಿ ಮಂಜುನಾಥ್, ಶರಣುಗೌಡ ಕಂದಕೂರ್ ಸೇರಿದಂತೆ ಸ್ಥಳೀಯ ಮುಖಂಡರು ಅನೇಕರು ಮಾಜಿ ಪ್ರಧಾನಿಗಳ ಜತೆಯಲ್ಲಿ ಇದ್ದರು.
ಚನ್ನಪಟ್ಟಣದಲ್ಲಿ ಎರಡು ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಮಾಸಿಕ ₹80 ಲಕ್ಷ ತಾಲೂಕಿಗೆ ಬರುತ್ತದೆ. ಕರ್ನಾಟಕಕ್ಕೆ ಹಾಲಿನ ಡೈರಿ ತಂದಿದ್ದು ಯಾರು? ಅದನ್ನು ತಂದ ಈ ದೇವೇಗೌಡ ಇನ್ನೂ ಬದುಕಿದ್ದೇನೆ. ಇಗ್ಗಲೂರು ಡ್ಯಾಂನಿಂದ ಎಲ್ಲರಿಗೂ ನೀರು ಸಿಗಲ್ಲ. ಅದಕ್ಕಾಗಿ ಹೈನುಗಾರಿಕೆ ಮಾಡಿ ಕೆಲವರು ಜೀವನ ಮಾಡುತ್ತಿದ್ದಾರೆ. ನಮ್ಮ ಹುಟ್ಟುಗುಣ ಬೇರೆಯವರಿಂದ ಕಿತ್ತುಕೊಳ್ಳುವುದಲ್ಲ. ನಮ್ಮದು ಕೊಡುವ ಕೈ. ಈ ಹಣ ಶಾಶ್ವತವಾಗಿ ಚನ್ನಪಟ್ಟಣಕ್ಕೆ ಬರುತ್ತಿದೆ ಎಂದು ಪ್ರಧಾನಿಗಳು ಹೇಳಿದರು.