ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಯನ್ನು ಶನಿವಾರ (ಆಗಸ್ಟ್ 5) ಲೋಕಾರ್ಪಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರೆಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಒಂದಾದಾಗಿ ಜಾರಿಗೊಳಿಸುತ್ತಿದೆ. ಅದರಂತೆ ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಕಲಬುರಗಿ ಜಿಲ್ಲಾ ಸಭಾಂಗಣದಲ್ಲಿ ಶುಕ್ರವಾರ (ಆಗಸ್ಟ್ 4) ಮಾಧ್ಯಮಗೋಷ್ಠಿಯಲ್ಲಿ ಪ್ರಿಯಾಂಕ್ ಖರ್ಗೆ ಮಾತನಾಡಿದರು.
ಗೃಹಜ್ಯೋತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಒಟ್ಟು 1,41,23,240 ಫಲಾನುಭವಿಗಳು ಹಾಗೂ ಕಲಬುರಗಿ ಜಿಲ್ಲೆಯಲ್ಲಿ 4,69,029 ಫಲಾನುಭವಿಗಳು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.
“ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳು ಜಾರಿಗೊಳ್ಳುವ ಹಂತದಲ್ಲಿದ್ದು ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಯುವನಿಧಿ ಯೋಜನೆ ಈ ಸಲದ ಶೈಕ್ಷಣಿಕ ವರ್ಷ ಮುಗಿದ ನಂತರ ಜಾರಿಯಾಗಲಿದೆ. ನಾವು ಭಾಷೆ ಕೊಟ್ಟಂತೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲಿದ್ದೇವೆ” ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಗೃಹಜ್ಯೋತಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 10 ಸಾವಿರ ಜನರಿಗೆ ಸಾಂಕೇತಿಕ ಬಿಲ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜನರಿಗೆ ಅಗತ್ಯ ಯೋಜನೆಗಳ ಜಾರಿಗೆ ಬೇಕಾಗವಷ್ಟು ಅನುದಾನವನ್ನು ಈಗಾಗಲೇ ಕಾಯ್ದಿರಿಸಲಾಗಿದೆ. ಯಾವುದೇ ಪ್ರಮುಖ ಯೋಜನೆಗಳಿಗೆ ಗ್ಯಾರಂಟಿಗಳಿಂದ ಆರ್ಥಿಕವಾಗಿ ತೊಂದರಯಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜಾಗತಿಕ ಟೆಂಡರ್: ಡಿ.ಕೆ ಶಿವಕುಮಾರ್
ಸರ್ಕಾರ ಇತರೆ ಇಲಾಖೆಗಳಿಂದ ಬರಬೇಕಾಗುವ ಬಾಕಿಯನ್ನು ಹಂತ ಹಂತವಾಗಿ ವಸೂಲಿ ಮಾಡುವುದರ ಜತೆಗೆ ಬದಲಿ ವ್ಯವಸ್ಥೆಯ ಮೂಲಕ ಆದಾಯ ಸಂಗ್ರಹಿಸಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
“ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯಿಂದಾಗಿ ಅವರ ಮೇಲಿನ ಗೌರವ ಕಡಿಮೆಯಾಗಿದೆ. ಇದು ಕೇಶವ ಕೃಪಾದ ಹೇಳಿಕೆ. ಅವರ ಹೇಳಿಕೆ ಆರ್ಎಸ್ಎಸ್ ಹೇಳಿಕೆಯಾಗಿದೆ. ದಲಿತರ ಮೇಲಿನ ಬಿಜೆಪಿಯ ಅಸಹನೆಯಾಗಿದೆ. ಈ ಅಸಹನೆ ಬಹಳ ದಿನ ಉಳಿಯುವುದಿಲ್ಲ. ರಾಜ್ಯದಲ್ಲಿ ಕೇಶವ ಕೃಪಾ ಆಳುತ್ತಿಲ್ಲ. ಬಾಬಾ ಸಾಹೇಬರ ಸಂವಿಧಾನದ ಪ್ರಕಾರ ಆಡಳಿತ ನಡೆಯುತ್ತಿದೆ. ಆರಗ ಅವರು ನಮಗೆ ಕ್ಷಮೆ ಕೇಳಬೇಕಿಲ್ಲ, ಕ್ಷಮೆ ಕೇಳಿದ ತಕ್ಷಣ ಮನಸ್ಥಿತಿ ಬದಲಾಗುತ್ತದೆಯೇ?” ಎಂದು ಪ್ರಿಯಾಂಕ್ ಖರ್ಗೆ ಕುಟುಕಿದರು.











