ಚಾಮರಾಜನಗರ: ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ನೌಕರರನ್ನು ಅಣ್ಣತಮ್ಮಂದಿರಂತೆ ನೋಡಿಕೊಂಡಿದೆ. ನೌಕರರ ಸಮಸ್ಯೆ ಆದಷ್ಟು ಬೇಗ ಪರಿಹಾರವಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗಿತ್ತು. ಯಾವುದೇ ಮುಷ್ಕರಕ್ಕೆ ಅವಕಾಶ ಕೊಟ್ಟಿರಲಿಲ್ಲ. ಇದು ಚುನಾವಣಾ ಸಂದರ್ಭ. ಇಂತಹ ಸಂದರ್ಭದಲ್ಲಿ ಮುಷ್ಕರ ಮಾಡಿದ್ರೆ ಸರ್ಕಾರ ಬಗ್ಗುತ್ತೆ ಎಂಬುದು ಅವರ ನಂಬಿಕೆ. ಶ್ರೀ ಸಾಮಾನ್ಯರಿಗೆ ತೊಂದರೆಯಾದರೆ ಸರ್ಕಾರಿ ನೌಕರರಿಗೆ ಒಳ್ಳೆಯದಾಗಲ್ಲ ಎಂದು ಹೇಳಿದರು.
ಯಡಿಯೂರಪ್ಪ ಮತ್ತು ಬೊಮ್ಮಾಯಿ ಅಣ್ಣತಮ್ಮಂದಿರಂತೆ ಇದ್ದಾರೆ. ಯಡಿಯೂರಪ್ಪ ಅವರು ಕಾಂಗ್ರೆಸ್ ಆರೋಪ ಮಾಡುವಷ್ಟು ನೀಚ ಮಟ್ಟಕ್ಕೆ ಹೋಗಲ್ಲ. ಯಡಿಯೂರಪ್ಪ ಅವರ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಮೇಲೆ ಆರೋಪ ಮಾಡುವವರು ಯಾವ ಪಾಪ ಕೂಪಕ್ಕೆ ಹೋಗ್ತಾರೋ ಗೊತ್ತಿಲ್ಲ. ಸರ್ಕಾರಿ ನೌಕರರ ಮುಷ್ಕರಕ್ಕೆ ಯಡಿಯೂರಪ್ಪ ಅವರ ಜೊತೆ ಸಂಬಂಧ ಕಲ್ಪಿಸುವ ನೀಚತನಕ್ಕೆ ಕಾಂಗ್ರೆಸ್ ಇಳಿಯಬಾರದಿತ್ತು ಎಂದು ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ಮಾದಪ್ಪನ ದರ್ಶನ ಪಡೆದ ಕೆ.ಎಸ್.ಈಶ್ವರಪ್ಪ
ಇದಕ್ಕೂ ಮುನ್ನ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಮಲೆಮಹದೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗೆ ಕ್ಷಣಗಣನೆ
ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮಹದೇಶ್ವರ ಬೆಟ್ಟ, ಹನೂರಿನಲ್ಲಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮಲೆ ಮಹದೇಶ್ವರ ದೇವಾಲಯ ಮುಂಭಾಗ ರಥಯಾತ್ರೆಕ್ಕೆ ಪೂಜೆ ಸಲ್ಲಿಸಲಾಗುತ್ತದೆ.
ಹನೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸಮಾವೇಶಕ್ಕಾಗಿ ಸಿಬ್ಬಂದಿ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.







