ನಳಂದ: ಬಿಹಾರದ ನಳಂದ ಜಿಲ್ಲೆಯ ರಾಜಗೀರ್ ಪಟ್ಟಣದ ಧರ್ಮಶಾಲೆಯೊಂದರಲ್ಲಿ ಕರ್ನಾಟಕದ ಮೂವರು ಮಹಿಳೆಯರು ಸೇರಿ ನಾಲ್ವರು ಪ್ರವಾಸಿಗರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಮೃತರನ್ನು ತುಮಕೂರು ಜಿಲ್ಲೆಯ ಗುಬ್ಬಿ ನಿವಾಸಿಗಳಾದ ಜಿ.ಆರ್. ಸುಮಂಗಲ (78), ಅವರ ಪುತ್ರ ಜಿ.ಆರ್. ನಾಗಪ್ರಸಾದ್ (50) ಮತ್ತು ಪುತ್ರಿಯರಾದ ಶಿಲ್ಪಾ ಜಿ.ಆರ್. (48), ಶ್ರುತಾ ಜಿ.ಬಿ. (43) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಒಂದೇ ಕುಟುಂಬದ ಸದಸ್ಯರು.

ಧರ್ಮಶಾಲೆಯ ಕೋಣೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಾಗಿಲು ಒಡೆದು ನೋಡಿದಾಗ ನಾಲ್ವರು ಮೃತಪಟ್ಟಿರುವುದು ಕಂಡುಬಂದಿದೆ. ಕೋಣೆ ಮೂರು ದಿನಗಳಿಂದ ಒಳಗಿನಿಂದಲೇ ಲಾಕ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ನಾಗಪ್ರಸಾದ್ ಸೋದರಿಯ 14 ವರ್ಷದ ಮಗ ಅಮೋಘ ಕೀರ್ತಿ ಆನ್‌ಲೈನ್ ಗೇಮ್‌ಗೆ ಅಡಿಕ್ಟ್ ಆಗಿದ್ದನಂತೆ. ಈ ಗೇಮ್‌ನಿಂದ ಸಾಕಷ್ಟು ಹಣವನ್ನು ಕಳೆದಿದ್ದ. ಇದರಿಂದ ನೊಂದು, ಸೋದರಿಯ ಮಗ ಅಮೋಘ ಕೀರ್ತಿಯನ್ನು ಸೋದರ ಮಾವ ನಾಗಪ್ರಸಾದ್ ಹತ್ಯೆ ಮಾಡಿದ್ದಾರೆ. ಬಳಿಕ ನಾಗಪ್ರಸಾದ್ ಜೈಲು ಪಾಲಾಗಿದ್ದರು. ಸೋದರಿಯರಾದ ಶಿಲ್ಪಾ, ಶುತ್ರಾ ಅವರೇ ನಾಗಪ್ರಸಾದ್‌ರನ್ನು ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಕರೆ ತಂದಿದ್ದರು. ಬಳಿಕ ಜನವರಿ 30ರಂದು ನೇಪಾಳ ಪ್ರವಾಸಕ್ಕೆಂದು ಹೊರಟವರು ನಳಂದದ ರಾಜಗೀರ್ ಧರ್ಮಶಾಲಾದಲ್ಲಿ ರೂಮು ಪಡೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಉಳಿದ ಮೂವರು ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಿಂದ ಅಪಾರ ಪ್ರಮಾಣದ ನಿದ್ರೆ ಮಾತ್ರೆಗಳು, ಮೊಬೈಲ್ ಫೋನ್‌ಗಳು, ಆಧಾರ್, ಪ್ಯಾನ್, ಎಟಿಎಂ ಕಾರ್ಡ್‌ಗಳು ಹಾಗೂ ರೂ.1.18 ಲಕ್ಷ ನಗದು ಪತ್ತೆಯಾಗಿದೆ.
ಇದನ್ನೂ ಓದಿ: ದಡ್ಡ ಶಾಸಕ ಹಾಗೂ ಪ್ರಕಾಶ್ ರಾಜ್ ಸಂಘಕ್ಕೆ ಭೇಟಿ ನೀಡಿ: ಜಗ್ಗೇಶ್ ಆಹ್ವಾನ
ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಿಹಾರ್ ಶರೀಫ್‌ನ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆಗೆ ನಳಂದ ಎಸ್‌ಪಿ ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಇಬ್ಬರು ಪೊಲೀಸರು ಕರ್ನಾಟಕದ ಗುಬ್ಬಿಗೆ ತೆರಳಿದ್ದಾರೆ. ಘಟನೆಯ ಕುರಿತು ಕರ್ನಾಟಕ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.







