ಬೆಂಗಳೂರು: ಬೆಂಗಳೂರು- ಮೈಸೂರು ಇನ್ಫಾಸ್ಟ್ರಕ್ಚರ್ ಯೋಜನೆಗೆ(Bangalore-Mysore Infrastructure Project) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ(Supreme Court) ರಿಟ್ ಅರ್ಜಿ ಒಂದು ಸಲ್ಲಿಕೆಯಾಗಿದ್ದು, ಅದರಲ್ಲಿ ನನ್ನನ್ನು ಕೂಡ ಪಾರ್ಟಿ ಮಾಡಿದ್ದಾರೆ. ಹೀಗಾಗಿ ಈ ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಶುಲ್ಕ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ ಎಂದು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು(Former PM HD Devegowda) ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಬಿಎಂಐಸಿ ಯೋಜನೆಗೆ ಹಣಕಾಸು ಇಲಾಖೆಯ ಸಹಮತಿಯೂ ಇತ್ತು. ಆಗ ಯೋಜನೆಗೆ ಒಪ್ಪಂದ (ಎಂಓಯು) ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದದ ಎಲ್ಲಾ ಮಾಹಿತಿಯೂ ಅವರಿಗೆ ಕೂಡ ಇದೆ ಎಂದರು.

ಈ ಯೋಜನೆಯು ಬೆಂಗಳೂರು ನಗರ, ಮಂಡ್ಯ, ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿತ್ತು. ಐದು ಟೌನ್‌ಶಿಪ್ ಗಳು, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಈ ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಶುಲ್ಕ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ. ನೈಸ್ ಕಂಪನಿ ವಿಚಾರದಲ್ಲಿ ಕಾನೂನು ಸಲಹೆಗಾರರಿಗೆ 55 ಲಕ್ಷ ರೂಪಾಯಿ ಕೊಡುತ್ತಿದ್ದಾರಂತೆ. ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್, ಕಾನೂನು ಸಲಹೆಗಾರರು ಇದ್ದರೂ ಸಹ ಇನ್ನೊಬ್ಬರನ್ನು ನೈಸ್ ಕಂಪನಿಗೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ನನಗೆ ಇನ್ನೂ ಹೋರಾಟದ ಕೆಚ್ಚಿದೆ. ಹೋರಾಟ ಮಾಡುವ ಶಕ್ತಿ ಇದೆ. ಒಂದು ಲಕ್ಷಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಮೂಲಕ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಹುದ್ದೆಗಳು ಭರ್ತಿಯಾಗದೇ ಹಾಗೆಯೇ ಖಾಲಿ ಉಳಿದಿವೆ. ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದರೆ ಎಷ್ಟು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಈಗಿನ ಮುಖ್ಯಮಂತ್ರಿಗಳಿಗೆ ಬಡವರ ಬಗ್ಗೆ ಎಲ್ಲಿಲ್ಲದ ಅನುಕಂಪ ಇದೆ. ಮುಖ್ಯಮಂತ್ರಿ ಕಚೇರಿಯಲ್ಲೇ ಏಳೆಂಟು ಮಂದಿ ಕ್ಯಾಬಿನೆಟ್ ದರ್ಜೆ ಪಡೆದುಕೊಂಡು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದು ಇವರ ಆಡಳಿತದ ವೈಖರಿ ಎಂದು ದೇವೇಗೌಡರು ಲೇವಡಿ ಮಾಡಿದರು.

ಕೇಂದ್ರವನ್ನು ದೂರಿದರೆ ಪ್ರಯೋಜನ ಇಲ್ಲ
ರಾಜ್ಯ ಸರ್ಕಾರ ಪ್ರತೀ ವಿಷಯಕ್ಕೂ ಕೇಂದ್ರ ಸರ್ಕಾರವನ್ನು ದೂರುತ್ತಾ ಕೂತರೆ ಪ್ರಯೋಜನ ಇಲ್ಲ. ಅದರಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದಾಗ ಕೇಂದ್ರ ಸರ್ಕಾರದಲ್ಲಿ ಡಾ. ಮನಮೋಹನ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯಂತೆ ರೈತರ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡಲು ಪತ್ರ ಬರೆದಾಗ ಕೇಂದ್ರ ಮನಮೋಹನ್ ಸಿಂಗ್, ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್, ನಬಾರ್ಡ್ ಯಾರೂ ಕೂಡ ಒಪ್ಪಿಗೆ ಕೊಡಲಿಲ್ಲ ಎಂದು ಹೇಳಿದರು.

ಈಗ ನೋಡಿದರೆ ರಾಜ್ಯ ಸರ್ಕಾರ ಬೆಳಗಿನಿಂದ ಸಂಜೆಯವರೆಗೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದೆ. ಹೀಗೆ ಟೀಕೆ ಮಾಡುತ್ತಾ ಹೋದರೆ ಆಗುವ ಪ್ರಯೋಜನ ಏನು? ಮುಖ್ಯಮಂತ್ರಿ ಆದವರು ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಗೆ ಹೋಗಿ ರಾಜ್ಯಕ್ಕೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿ ಹೋರಾಟ ಮಾಡಬೇಕು. ಸಂಸದರಾಗಿ ನಾವು ನಮ್ಮ ಕರ್ತವ್ಯ ನಿಭಾಯಿಸುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.










