ಬೆಂಗಳೂರು :ಮಾ.೨೫: ಕಾಂಗ್ರೆಸ್ ಪಕ್ಷ ಅಳೆದೂ ತೂಗಿ ರಾಜ್ಯ ವಿಧಾನಸಭಾ ಚುನಾವಣೆಗೆ ಟಿಕೆಟ್ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ 124 ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಬಿಡುಗಡೆ ಮಾಡಿದ್ದು, ಭಾರೀ ಹಗ್ಗಾಜಗ್ಗಾಟ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 130 ಕ್ಷೇತ್ರಗಳ ಪಟ್ಟಿ ರಿಲೀಸ್ ಮಾಡುತ್ತೇವೆ ಎಂದಿದ್ದ ಕಾಂಗ್ರೆಸ್ ನಾಯಕರು, ಇದೀಗ ಭಾರೀ ಒತ್ತಡ ಎದುರಾದ ಬೆನ್ನಲ್ಲೇ 6 ಜನರ ಹೆಸರನ್ನು ತೆಗೆದು ಹಾಕಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಸಿದ್ದರಾಮಯ್ಯ ಟಿಕೆಟ್ ಗೊಂದಲಕ್ಕೆ ಇತಿಶ್ರೀ ಹಾಡಲಾಗಿದ್ದು, ಮೈಸೂರಿನ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಆಗಿದೆ. ಇನ್ನು ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡುವ ಚರ್ಚೆ ನಡೆಯುತ್ತಿದೆ ಎಂದಿದ್ದ ಮಾತಿಗೂ ಫುಲ್ಸ್ಟಾಪ್ ಬಿದ್ದಿದ್ದು, ಇಕ್ಬಾಕ್ ಹುಸೇನ್ಗೆ ಟಿಕೆಟ್ ಘೋಷಣೆ ಆಗಿದೆ.
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಜಾತಿವಾರು ಲೆಕ್ಕಾಚಾರ..!
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಬರೋಬ್ಬರಿ 32 ಮಂದಿ ಲಿಂಗಾಯತ ಸಮುದಾಯ ಜನರಿಗೆ ಟಿಕೆಟ್ ಘೋಷಣೆ ಆಗಿದೆ. 19 ಮಂದಿ ಒಕ್ಕಲಿಗ ಸಮುದಾಯವರಿಗೆ ಟಿಕೆಟ್ ಘೋಷಣೆ ಆಗಿದೆ. 8 ಮಂದಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಕ್ಕಿದೆ. ಐವರು ಬ್ರಾಹ್ಮಣರು, ಓರ್ವ ಕ್ರಿಶ್ಚಿಯನ್, ಬಂಟ್ ಸಮುದಾಯದ ಓರ್ವ ಹಾಗು ಒಂದು ಕುಂಭಾರ, 4 ಈಡಿಗ, 10 ಮಂದಿ ಎಸ್ಟಿ ವರ್ಗ, 2 ಮರಾಠಿ, ಐವರು ಕುರುಬ, 1 ರಜಪೂತ್, ಇನ್ನುಳಿದಂತೆ 20 ಮಂದಿ ಒಬಿಸಿ ಸಮುದಾಯಗಳಿಗೆ ಸೇರಿದ ಜನರಿಗೆ ಟಿಕೆಟ್ ಘೋಷಣೆ ಆಗಿದೆ. ಹಾಲಿ ಶಾಸಕರಾಗಿರುವ 61 ಜನರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿದ್ದು, ಉಳಿದವರಿಗೆ ಟಿಕೆಟ್ ಇನ್ನು ಗೊಂದಲವಾಗಿದೆ. ಅದರಲ್ಲೂ ಪುಲಿಕೇಶಿ ನಗರದ ಅಖಂಡ ಶ್ರೀನಿವಾಸ ಮೂರ್ತಿ, ಅಫಜಲಪುರದ ಎಂ.ವೈ ಪಾಟೀಲ್, ಕುಂಗದೋಳದ ಕುಸುಮಾವತಿ ಎಂ ಶಿವಳ್ಳಿ, ಹರಿಹರ ರಾಮಪ್ಪ, ಶಿಡ್ಲಘಟ್ಟ ವಿ ಮುನಿಯಪ್ಪಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿಲ್ಲ.
ಕಾಂಗ್ರೆಸ್ ಟಿಕೆಟ್ ಪಡೆಯಲು ಯಶಸ್ವಿಯಾದ ಕುಟುಂಬ..!
ಬೆಂಗಳೂರಿನ ವಿಜಯನಗರದಲ್ಲಿ ಎಂ ಕೃಷ್ಣಪ್ಪ, ಗೋವಿಂದರಾಜನಗರದಿಂದ ಮಗ ಪ್ರಿಯಾಕೃಷ್ಣ, ಬಿಟಿಎಂ ಲೇಔಟ್ನಲ್ಲಿ ರಾಮಲಿಂಗಾರೆಡ್ಡಿ, ಜಯನಗರದಲ್ಲಿ ಮಗಳು ಸೌಮ್ಯಾರೆಡ್ಡಿ, ದೇವನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದಿಂದ ಕೆ.ಹೆಚ್ ಮುನಿಯಪ್ಪ, ಕೆಜಿಎಫ್ ಕ್ಷೇತ್ರದಿಂದ ಮಗಳು ರೂಪಕಲಾ, ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರದಿಂದ ಮಗ ಎಸ್.ಎಸ್ ಮಲ್ಲಿಕಾರ್ಜುನ್ಗೆ ಟಿಕೆಟ್ ಘೋಷಣೆ ಆಗಿದೆ. ಚಿತ್ತಾಪುರದಿಂದ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಗುಂಡ್ಲುಪೇಟೆಯಿಂದ ಮಹದೇವಪ್ರಸಾದ್ ಪುತ್ರ ಹೆಚ್.ಎಂ ಗಣೇಶ್ ಪ್ರಸಾದ್, ಕುಣಿಗಲ್ ಕ್ಷೇತ್ರದಿಂದ ಡಿ.ಕೆ ಶಿವಕುಮಾರ್ ಸಂಬಂಧಿ ಡಾ ಹೆಚ್.ಡಿ ರಂಗನಾಥ್, ಸೊರಬ ಕ್ಷೇತ್ರದಿಂದ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ, ರಾಣೆಬೆನ್ನೂರು ಕ್ಷೇತ್ರದಿಂದ ಕೆ.ಬಿ ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡಗೆ ಟಿಕೆಟ್ ಲಭ್ಯವಾಗಿದೆ. ಆದರೆ ಹಾಲಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ತಂದೆ ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದು, ಟಿಕೆಟ್ ಮಿಸ್ ಆಗಿದೆ.
ಕಾಂಗ್ರೆಸ್ ಟಿಕೆಟ್ ಪಡೆದುಕೊಂಡ ರಾಜ್ಯದ ಪ್ರಮುಖ ಲೀಡರ್ಸ್..!
ಇನ್ನುಳಿದಂತೆ ಪ್ರಮುಖ ನಾಯಕರಾದ ಡಿ.ಕೆ ಶಿವಕುಮಾರ್ಗೆ ಕನಕಪುರ ಕ್ಷೇತ್ರದ ಟಿಕೆಟ್ ಘೋಷಣೆ ಆಗಿದ್ರೆ, ನಾಗಮಂಗಲದಿಂದ ಚಲುವರಾಯಸ್ವಾಮಿ, ಭಾಲ್ಕಿಯಿಂದ ಈಶ್ವರ್ ಖಂಡ್ರೆ, ಗದಗದಿಂದ ಹೆಚ್.ಕೆ ಪಾಟೀಲ್, ಹಳಿಯಾಳದಿಂದ ಆರ್.ವಿ ದೇಶಪಾಂಡೆ, ಸೊರಬದಿಂದ ಮಧು ಬಂಗಾರಪ್ಪ, ಕೊರಟಗೆರೆ ಎಸ್ಸಿ ಕ್ಷೇತ್ರದಿಂದ ಡಾ ಜಿ ಪರಮೇಶ್ವರ್, ಶ್ರೀನಿವಾರಪುರದಿಂದ ಕೆ.ಆರ್ ರಮೇಶ್ ಕುಮಾರ್, ಬ್ಯಾಟರಾಯನಪುರದಿಂ ಕೃಷ್ಣಭೈರೇಗೌಡ, ಆರ್.ಆರ್ ನಗರದಿಂದ ಕುಸುಮಾ, ಸರ್ವಜ್ಞನಗರದಿಂದ ಕೆ.ಜೆ ಜಾರ್ಜ್, ಗಾಂಧಿ ನಗರದಿಂದ ದಿನೇಶ್ ಗುಂಡೂರಾವ್, ಚಾಮರಾಜಪೇಟೆಯಿಂದ ಜಮೀರ್ ಅಹ್ಮದ್ ಖಾನ್, ಮಂಗಳೂರಿನಿಂದ ಯು.ಟಿ ಖಾದರ್, ಟಿ ನರಸೀಪುರ ಕ್ಷೇತ್ರದಿಂದ ಹೆಚ್.ಸಿ ಮಹದೇವಪ್ಪ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷ್ಣಮಣಿ


