ಗೋವಾ: ಇಲ್ಲಿನ ನೈಟ್ ಕ್ಲಬ್ವೊಂದರಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಸಿಲಿಂಡರ್ ಗ್ಯಾಸ್ ಸೋರಿಕೆಯ ಸ್ಫೋಟದಲ್ಲಿ 25 ಮಂದಿ ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ.
ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ಕ್ಲಬ್ ನಲ್ಲಿ ಬೆಂಕಿ ಹೊತ್ತಿಕೊಂಡಾಗ ಡ್ಯಾನ್ಸ್ ಫ್ಲೋರ್ನಲ್ಲಿ ಕನಿಷ್ಠ 100 ಮಂದಿ ಇದ್ದರು. ಬೆಂಕಿ ಕಾಣಿಸಿಕೊಂಡಾಗ ಅಲ್ಲಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಡುಗೆ ಕೋಣೆಯತ್ತ ಓಡಿ ಹೋದರು. ಇದರಿಂದಾಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಸಿಕ್ಕಿಹಾಕಿಕೊಂಡು 23 ಮಂದಿ ಬೆಂಕಿಯ ಹೊಗೆಗೆ ಸಿಲುಕಿ ಉಸಿರುಗಟ್ಟಿ ಪ್ರಾಣಬಿಟ್ಟಿದ್ದರೆ, ಇಬ್ಬರು ಬೆಂಕಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಪಣಜಿಯಿಂದ 25 ಕಿ.ಮೀ. ದೂರದ ಕ್ಲಬ್ ನಲ್ಲಿ ನಡೆದ ಈ ಘಟನೆಯಲ್ಲಿ ಮೃತರಲ್ಲಿ ಹೆಚ್ಚಿನವರು ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಆಗಿದ್ದಾರೆ. ಅವಘಡದಲ್ಲಿ ಮೂರರಿಂದ ನಾಲ್ವರು ಪ್ರವಾಸಿಗರು ಹಾಗೂ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

ಇನ್ನು ಗೋವಾ ಪೊಲೀಸರ ಪ್ರಕಾರ ರಾತ್ರಿ 1 ಗಂಟೆ ಸುಮಾರಿಗೆ ನೈಟ್ಕ್ಲಬ್ನ ಅಡುಗೆ ಪ್ರದೇಶದ ಬಳಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಸ್ಫೋಟವಾದ ಕೆಲ ಸೆಕೆಂಡುಗಳಲ್ಲಿ ಕಟ್ಟಡದಾದ್ಯಂತ ಬೆಂಕಿ ಹರಡಿತು. ಸ್ಫೋಟದ ಸಮಯದಲ್ಲಿ ನೈಟ್ ಕ್ಲಬ್ ಮುಚ್ಚುವ ಕೆಲಸ ಮುಚ್ಚುವ ಕೆಲಸ ನಡೆಯುತ್ತಿತ್ತು.

ಸದ್ಯ ಘಟನೆ ಬಗ್ಗೆ ಸ್ಥಳೀಯ ಪೊಲೀಸರು, ಎಫ್ಎಸ್ಎಲ್ ತಂಡ ಮತ್ತು ಜಿಲ್ಲಾಡಳಿತವು ತನಿಖೆ ಪ್ರಾರಂಭಿಸಿದೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಆದರೆ ಗಾಯಗೊಂಡವರ ಸಂಖ್ಯೆ ಮತ್ತು ಸ್ಥಿತಿಯ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಕ್ಲಬ್ನ ಸುರಕ್ಷತಾ ಮಾನದಂಡಗಳು, ಅನಿಲ ಸಂಪರ್ಕಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಘಟನೆ ಬಳಿಕ ನೈಟ್ಕ್ಲಬ್ ಸೀಲ್ ಮಾಡಲಾಗಿದೆ ಮತ್ತು ಮಾಲೀಕರನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಗೋವಾ ಸಿಎಂ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನೈಟ್ಕ್ಲಬ್ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಿಲ್ಲ ಎಂದು ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ. ಸುರಕ್ಷತಾ ಉಲ್ಲಂಘನೆಗಳನ್ನು ನಿರ್ಲಕ್ಷಿಸಿದ ಕ್ಲಬ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕರಾವಳಿ ರಾಜ್ಯಕ್ಕೆ ಭೇಟಿ ನೀಡುವ ಸಮಯದಲ್ಲಿ ಈ ದುರದೃಷ್ಟಕರ ಘಟನೆ ಸಂಭವಿಸಿದೆ. ನಾವು ಸಂಪೂರ್ಣ ತನಿಖೆ ನಡೆಸುತ್ತೇವೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹೇಳಿದರು.






