ಚಿತ್ರದುರ್ಗ: ನಿನ್ನೆ ನಸುಕಿನ ಜಾವ ಚಿತ್ರದುರ್ಗದ(Chitradurga ) ಹಿರಿಯೂರು(Hiriyur) ತಾಲೂಕಿನ ಜವನಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತ(Accident) ಸಂಭವಿಸಿದ ಸಮಯದಲ್ಲಿ ಹೆಚ್ಚಿನ ಜನರು ಸಜೀವ ದಹನವಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿತ್ತು. ಬಳಿಕ ಪೊಲೀಸರು ನೀಡಿದ ಸ್ಪಷ್ಟನೆಯಲ್ಲಿ ಆರು ಮಂದಿ ಸಜೀವ ದಹನವಾಗಿದ್ದರೆ, ಮತ್ತೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಸೀ ಬರ್ಡ್ ಖಾಸಗಿ ಬಸ್‌ನಲ್ಲಿ ಒಟ್ಟು 33 ಜನರು ಪ್ರಯಾಣ ಮಾಡುತ್ತಿದ್ದರು ಈ ಪೈಕಿ 26 ಮಂದಿ ಗಾಯಗೊಂಡು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಇನ್ನೂ ಕೆಲವರು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಪಘಾತ ಸಂಬಂಧ ಒಟ್ಟು ಮೂರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸೀ ಬರ್ಡ್ ಖಾಸಗಿ ಬಸ್ ಸಂಸ್ಥೆಯ ಮಾಲೀಕರು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಆರ್‌ಟಿಓ ಇಲಾಖೆಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅಷ್ಟಕ್ಕೂ ಆಗಿದ್ದೇನು..?
ನಿನ್ನೆ ಡಿಸೆಂಬರ್ 25 ಗುರುವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು(Hiriyuru) ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಖಾಸಗಿ ಬಸ್ ಭೀಕರ ಅಪಘಾತ ಸಂಭವಿಸಿತ್ತು. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಸೀಬರ್ಡ್ ಸ್ಲೀಪರ್ ಕೋಚ್ ಬಸ್‌ಗೆ, ಎದುರಿನಿಂದ ಬರುತ್ತಿದ್ದ ಲಾರಿ ಡಿವೈಡರ್ ಹಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿತ್ತು. ಲಾರಿ ಡಿಕ್ಕಿ ಹೊಡೆದ ತಕ್ಷಣ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅಪಾರ ಸಾವು ನೋವು ಸಂಭವಿಸಿದೆ.






