ಮಹಾರಾಷ್ಟ್ರದಲ್ಲಿ ನಾಗ್ಪುರ ಜಿಲ್ಲೆಯಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ದುರ್ಘಟನೆ ಕಲ್ಮೇಶ್ವರ ತಾಲೂಕಿನ ರೌಲ್ಗಾಂವ್ ಬಳಿ ನಡೆದಿದೆ.

ಸ್ಫೋಟಕಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯರು ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದರೆ, 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗ್ಗೆ 6 ಗಂಟೆಯ ಪಾಳಿಗೆ ಸುಮಾರು 35 ಕಾರ್ಮಿಕರು ಕೆಲಸಕ್ಕೆ ಬಂದಿದ್ದು, ಬೆಳಗ್ಗೆ 7ರಿಂದ 7.15ರ ನಡುವೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಕಂಪನಿ ಶೀಘ್ರದಲ್ಲೇ ಅಧಿಕೃತ ಹೇಳಿಕೆ ನೀಡುವುದಾಗಿ ತಿಳಿಸಿದೆ. ಈ ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.







