ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಶೀಘ್ರದಲ್ಲಿಯೇ ಮತ್ತೆ ಸಚಿವರಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿದರೆ, ಈಶ್ವರಪ್ಪ ನಿರಪರಾಧಿಯಾಗಿ ಮತ್ತೆ ಮಂತ್ರಿಯಾಗಬಹುದು. ಭ್ರಷ್ಟಾಚಾರ ಆರೋಪದಲ್ಲಿ ಅವರು ಮುಕ್ತರಾಗಿ ಹೊರಬರುತ್ತಾರೆ, ಮತ್ತೆ ಸಂಪುಟದ ಭಾಗವಾಗುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಯಾವುದೇ ತಪ್ಪು ಮಾಡದ ಈಶ್ವರಪ್ಪ, ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.. ಅನಿವಾರ್ಯವಾಗಿ, ಸಚಿವ ಸಂಪುಟಕ್ಕೆ ರಾಜಿನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಯಾವುದೋ ಒತ್ತಾಯಕ್ಕಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಯಾವುದೇ ಅಪರಾಧವಿಲ್ಲದೇ ಇದ್ದರೂ, ರಾಜೀನಾಮೆ ನೀಡುವಂತಾಗಿದೆ. ಇನ್ನೆರಡು ತಿಂಗಳಲ್ಲಿ ತನಿಖೆ ಮುಗಿದರೆ, ಇವರ ಪಾತ್ರವೇನೂ ಇಲ್ಲ ಎಂಬುದು ತಿಳಿಯಲಿದೆ. ಅವರು ನಿರಪರಾಧಿಯಾಗಿ ಹೊರಗೆ ಬರುತ್ತಾರೆ.ಆಗ ಅವರಿಗೆ ಸಂಪುಟದಲ್ಲಿ ಸೇರಿಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.