ದೇಶದ ಆರು ಕೋಟಿ ಕಾರ್ಮಿಕರಿಗೆ ಇಲ್ಲೊಂದು ಸಂತಸದ ಸುದ್ಧಿ. ಮೋದಿ ಸರ್ಕಾರ ದುರಾಸೆ ಪಡದೇ ಇದ್ದರೆ, 2021-22ನೇ ಸಾಲಿನಲ್ಲೂ ಕಾರ್ಮಿಕರ ಭವಿಷ್ಯ ನಿಧಿ ಮೇಲೆ ಶೇ.8.5 ಅಥವಾ ಅದಕ್ಕಿಂತಲೂ ಹೆಚ್ಚು ದರ ಲಭ್ಯವಾಗುವ ಸಾಧ್ಯತೆ ಇದೆ. ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ಷೇರುಪೇಟೆಯಲ್ಲಿ ಮಾಡಿರುವ ಹೂಡಿಕೆ ಮೇಲೆ ನಿರೀಕ್ಷೆ ಮೀರಿದ ಲಾಭ ಬಂದಿದೆ.
ಇಪಿಎಫ್ಒ ನಿಧಿಯನ್ನು ಎಸ್ಬಿಐ ಮ್ಯೂಚುವಲ್ ಫಂಡ್ ಮತ್ತು ಯುಟಿಐ ಮ್ಯೂಚುವಲ್ ಫಂಡ್ ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಜವಾಬ್ದಾರಿ ಹೊತ್ತಿವೆ. 2021 ಮಾರ್ಚ್ ಅಂತ್ಯದ ವೇಳೆಗೆ ಇಪಿಎಫ್ಒ ಷೇರುಮಾರುಕಟ್ಟೆಯಲ್ಲಿ ಒಟ್ಟು 1.23 ಲಕ್ಷ ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿತ್ತು. ಈ ಮೊತ್ತವು ಲಾಭಾಂಶವೂ ಸೇರಿ 1.6 ಲಕ್ಷ ಕೋಟಿ ರುಪಾಯಿಗಳಿಗೆ ಏರಿದೆ. ಎಸ್ಬಿಐ ಮ್ಯೂಚುವಲ್ ಫಂಡ್ 86,577.51 ಕೋಟಿ ರುಪಾಯಿಗಳ ಹೂಡಿಕೆಯನ್ನು ನಿರ್ವಹಣೆ ಮಾಡುತ್ತಿದೆ. ಮಾರ್ಚ್ ಅಂತ್ಯದ ವೇಳೆಗೆ ಹೂಡಿಕೆ ಮೇಲೆ ಶೇ.15.76ರಷ್ಟು ಲಾಭ ಗಳಿಸಿದೆ. ಯುಟಿಐ ಮ್ಯೂಚುವಲ್ ಫಂಡ್ 26,401.33 ಕೋಟಿ ರುಪಾಯಿಗಳ ಹೂಡಿಕೆ ನಿರ್ವಹಿಸುತ್ತಿದ್ದು ಶೇ.16.37ರಷ್ಟು ಲಾಭ ಗಳಿಸಿದೆ.
ಈ ನಡುವೆ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತದ ಗುರಿ ಸಾಧಿಸುವ ಸಲುವಾಗಿ ಪ್ರಾರಂಭಿಸಿದ ಭಾರತ್ 22 ಮತ್ತು ಕೇಂದ್ರೀಯ ಸಾರ್ವಜನಿಕ ಉದ್ಯಮ ವಲಯದ ಎಕ್ಸ್ಚೆಂಜ್ ಟ್ರೇಡೆಡ್ ಫಂಡ್ (ಸಿಪಿಎಸ್ಇ ಇಟಿಎಫ್) ಹೆಚ್ಚಿನ ಲಾಭಾಂಶ ಮಾಡಿಲ್ಲ. ಇಪಿಎಫ್ಒ ಈ ಎರಡೂ ಯೋಜನೆಗಳಲ್ಲಿ 10,007 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ. ಭಾರತ್ 22 ಇಟಿಎಫ್ ಗಳಿಕೆಯು ಶೇ.2.1ರಷ್ಟು ಮಾತ್ರ. ಆದರೆ ಸಿಪಿಎಸ್ಇ ಇಟಿಎಫ್ ಶೇ.-1.7ರಷ್ಟು ಹೂಡಿಕೆ ಮೇಲೆ ನಷ್ಟ ಅನುಭವಿಸಿದೆ.
ಹಣಕಾಸು ಮಾರುಕಟ್ಟೆಯಲ್ಲಿ ಬಡ್ಡಿದರ ಸತತ ಕುಸಿಯುತ್ತಿದೆ. ಬ್ಯಾಂಕುಗಳು ನಿಶ್ಛಿತ ಠೇವಣಿಗಳ ಮೇಲೆ ನೀಡುತ್ತಿರುವ ಬಡ್ಡಿದರಗಳು ಗರಿಷ್ಠ ಶೇ.7ಕ್ಕಿಂತ ಹೆಚ್ಚಿಲ್ಲ. ಈ ಹಂತದಲ್ಲಿ ಅತಿ ಹೆಚ್ಚು ಬಡ್ಡಿದರ ನೀಡುತ್ತಿರುವುದು ಇಪಿಎಫ್ಒ. ಪ್ರಸಕ್ತ ಶೇ.8.5ರಷ್ಟು ಬಡ್ಡಿದರ ನೀಡುತ್ತಿರುವ ಇಪಿಎಫ್ಒ ಒಂದು ಹಂತದಲ್ಲಿ ಅದನ್ನು ಶೇ.8ಕ್ಕೆ ತಗ್ಗಿಸಬೇಕಾದ ಪರಿಸ್ಥಿತಿಯನ್ನು ಎದುರಿಸಿತ್ತು. ಹಣಕಾಸು ಸಚಿವಾಲಯದ ನಿರ್ದೇಶನದಂತೆ ನಡೆದುಕೊಳ್ಳುವ ಇಪಿಎಫ್ಒ ಕೇಂದ್ರೀಯ ವಿಶ್ವಸ್ಥ ಮಂಡಳಿಯು ಶೇ.8.5ಕ್ಕೆ ಕಡಮೆ ಬಡ್ಡಿದರ ನಿಗದಿ ಮಾಡುವುದಕ್ಕೆ ಸಮ್ಮತಿ ನೀಡಿರಲಿಲ್ಲ. ಅಲ್ಲದೇ ಚುನಾವಣೆಗಳು ಮತ್ತಿತರ ಕಾರಣಗಳಿಂದಾಗಿ ಮೋದಿ ಸರ್ಕಾರವು ಪಿಎಫ್ ಬಡ್ಡಿ ದರವನ್ನು ತಗ್ಗಿಸುವ ಸಾಹಸಕ್ಕೆ ಇಳಿಯಲಿಲ್ಲ.
ಈಗ ಲಭ್ಯವಾಗಿರುವ ಅಂಕಿ ಅಂಶಗಳು 2021 ಮಾರ್ಚ್ ಅಂತ್ಯಕ್ಕೆ ಇದ್ದವು. ಆಗ ಸೆನ್ಸೆಕ್ಸ್ 49,509 ಅಂಶಗಳಷ್ಟಿತ್ತು. ನವೆಂಬರ್ 17 ರಂದು ಮಾರುಕಟ್ಟೆ ಅಂತ್ಯಗೊಂಡಾಗ ಸೆನ್ಸೆಕ್ಸ್ 60,008 ಅಂಶಗಳಷ್ಟಿತ್ತು. ಏಪ್ರಿಲ್ ನಿಂದ ನವೆಂಬರ್ ವರೆಗೂ ಷೇರುಪೇಟೆ ಸೂಚ್ಯಂಕಗಳು ಶೇ.20ರಷ್ಟು ಏರಿಕೆ ಕಂಡಿವೆ. ಈ ಏರಿಕೆಯಿಂದಾಗಿ ಇಪಿಎಫ್ ಮಾಡಿರುವ ಹೂಡಿಕೆಯ ಮೇಲಿನ ಲಾಭವು ಮತ್ತಷ್ಟು ಹೆಚ್ಚಾಗಲಿದೆ. ಅಂದರೆ, 1.23 ಲಕ್ಷ ಕೋಟಿ ರುಪಾಯಿ ಹೂಡಿಕೆಯ ಮೇಲಿನ ಒಟ್ಟು ಲಾಭವು ಮಾರುಕಟ್ಟೆ ಸ್ಥಿರವಾಗಿದ್ದರೆ, ಶೇ.15-20 ರಷ್ಟು ಏರಬಹುದು. ಒಟ್ಟಾರೆ ಹೂಡಿಕೆ ಮತ್ತು ಲಾಭಾಂಶ ಸೇರಿ ಇಪಿಎಫಒ ಹೂಡಿಕೆ ಮೊತ್ತವು 1.9 ರಿಂದ 2 ಲಕ್ಷ ಕೋಟಿ ರುಪಾಯಿಗಳಿಗೆ ಏರಬಹುದು.
ಇಪಿಎಫ್ಒ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಬಾಂಡ್ ಗಳು ಮತ್ತು ಸೆಕ್ಯುರಿಟೀಸ್ ಗಳ ಮೇಲೆ ಹೂಡಿಕೆ ಮಾಡುತ್ತದೆ. ಅವುಗಳ ಮೇಲಿನ ಲಾಭಾಂಶವು ಸಾಮಾನ್ಯವಾಗಿ ಶೇ.7ರಿಂದ 8ರ ಆಜುಬಾಜಿನಲ್ಲಿರುತ್ತದೆ. ಇದೇ ಕಾರಣಕ್ಕಾಗಿ ಇಪಿಎಫ್ಒ ಸದಸ್ಯರಿಗೆ (ಕಾರ್ಮಿಕರಿಗೆ) ವಾರ್ಷಿಕ ಬಡ್ಡಿ ಶೇ.8.5ರಷ್ಟು ನೀಡಲು ಹಿಂಜರಿಯುತ್ತಿತ್ತು. ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಆರಂಭಿಸಿದಂದಿನಿಂದಲೂ ಇಪಿಎಫ್ಒ ಉತ್ತಮ ಲಾಭ ಮಾಡುತ್ತಿದೆ. ಪ್ರಸಕ್ತ ವರ್ಷದಲ್ಲಿ ಷೇರುಪೇಟೆ ಸೂಚ್ಯಂಕಗಳು ಏರುಹಾದಿಯಲ್ಲೇ ಸಾಗುತ್ತಿದ್ದು ಮತ್ತಷ್ಟು ಏರುವ ನಿರೀಕ್ಷೆ ಇದೆ. ಹೀಗಾಗಿ ಕಾರ್ಮಿಕರ ಭವಿಷ್ಯ ನಿಧಿ ಮೇಲೆ ಶೇ.8.5ರಷ್ಟು ಬಡ್ಡಿ ನೀಡಲು ಇಪಿಎಫ್ಒಗೆ ಹೆಚ್ಚಿನ ಹೊರೆಯಾಗದು.
ಸಮಾಧಾನದ ಸಂಗತಿ ಎಂದರೆ ಮುಂಬರುವ ವರ್ಷದಲ್ಲಿ ವಿವಿಧ ರಾಜ್ಯಗಳಲ್ಲಿ ಚುನಾವಣೆಗಳು ನಡೆಯುವುದರಿಂದ ಮೋದಿ ಸರ್ಕಾರವು ಕಾರ್ಮಿಕರ ಭವಿಷ್ಯ ನಿಧಿ ಮೇಲಿನ ಬಡ್ಡಿ ಪ್ರಮಾಣವನ್ನು ತಗ್ಗಿಸಲು ದುಸ್ಸಾಹಸಕ್ಕೆ ಇಳಿಯಲಾರದು. ಆದರೆ, ಇಪಿಎಫ್ಒ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಗುರಿ ಸಾಧನೆಗಾಗಿ ರೂಪಿಸಿದ ಭಾರತ್ ಇಟಿಎಫ್ ಮತ್ತು ಸಿಪಿಎಸ್ಇ ಇಟಿಎಫ್ ನಂತಹ ಲಾಭಾಂಶ ಇಲ್ಲದ ಯೋಜನೆಗಳ ಮೇಲೆ ಹೂಡಿಕೆ ಮಾಡುವ ಮುನ್ನ ಯೋಚಿಸಬೇಕಿದೆ.