
ಕೊಪ್ಪಳದ ಸಣಾಪುರದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲಿ ಡ್ರಗ್ ಮಾಫಿಯ ಹಿಂದೆ ಕೆಲ ರಾಜಕಾರಣಿಗಳು, ಅಧಿಕಾರಿಗಳು ಕೂಡ ಕೈವಾಡ ಇದೆ. ಅಲ್ಲಿ ಕೆಲವರು ಶಾಮೀಲಾಗಿ ಈ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿ ಅಕ್ರಮ ಹೊಂ ಸ್ಟೇಗಳನ್ನು ಬಂದ್ ಮಾಡಬೇಕು ಎಂದಿರುವ ರಾಯರೆಡ್ಡಿ, ವಿಶ್ವವಿಖ್ಯಾತ ಹಂಪಿ ನೋಡಲು ಬರೋ ಹೆಸರಲ್ಲಿ ಈ ರೀತಿಯ ಕೆಲಸ ಮಾಡಲಾಗ್ತಿದೆ. ಹಂಪಿ ನೋಡಲು ಬರುವ ಹೈ-ಫೈ ವಿದೇಶಿಗರಲ್ಲ ಬರೋದೇ ಡ್ರಗ್ಸ್ ಚಟದವರು. ಅವರು ಬರೋರೇ ಈ ಕೆಲಸಕ್ಕಾಗಿ ಎಂದು ದೂರಿದ್ದಾರೆ.

ಹೊಸಪೇಟೆಯಲ್ಲಿ ಬಸವರಾಜ್ ರಾಯರೆಡ್ಡಿ ಮಾತನಾಡಿ, ಈ ಡ್ರಗ್ಸ್ ಜಾಲ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜಾಲವಾಗಿದೆ. ಅದೊಂದು ವ್ಯವಸ್ಥೆಯಾಗಿದೆ, ಹೊರತು ಬೇರೆನೂ ಇಲ್ಲ. ಗಂಗಾವತಿ ಭಾಗದಲ್ಲಿ ಅಷ್ಟೆ ಅಲ್ಲ, ಎಲ್ಲಾ ಟೂರಿಸ್ಟ್ ಪ್ಲೇಸ್ಗಳಲ್ಲೂ ಕೂಡ ಇದೇ ರೀತಿಯ ಅಕ್ರಮ ಡ್ರಗ್ಸ್ ದಂಧೆ ನಡೆಯುತ್ತದೆ. ಮೊದಲಿನಿಂದಲೂ ಈ ಪದ್ಧತಿಗಳು ನಡೆದುಕೊಂಡು ಬಂದಿವೆ ಎಂದಿದ್ದಾರೆ.

ನಾನು ಈ ಹಿಂದೆ ಈ ಬಗ್ಗೆ ವಿಧಾನಸೌಧದಲ್ಲಿ ಪ್ರಸ್ತಾಪ ಮಾಡಿದ್ದೇನೆ. ನನ್ನ ವಿರುದ್ಧವೇ ಕೆಲವರು ಸಿಕ್ಕಾಪಟ್ಟೆ ಮಾತನಾಡಿದ್ರು. ಗಂಗಾವತಿ ಶಾಸಕ ಕೂಡ ಮಾತನಾಡಿದ್ರು. ಇದಕ್ಕೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಕಡಿವಾಣ ಹಾಕಬೇಕು. ನಾನು ಗೃಹ ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಅವರ ಬಳಿ ಮಾತನಾಡುವೆ ಎಂದಿದ್ದಾರೆ.







