ಈ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಕೆಲವು ತಿಂಗಳ ಜೈಲುವಾಸ ಅನುಭವಿಸಿದ್ದ ನಟಿ ರಾಗಿಣಿ ದ್ವಿವೇದಿ ಮತ್ತು ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಸೇವನೆ ಮಾಡಿರುವುದು ಅವರ ತಲೆ ಕೂದಲಿನ ಎಫ್‌ಎಸ್‌ಎಲ್ ವರದಿಯಲ್ಲಿ ಧೃಡಪಟ್ಟಿರುವ ಸಂಗತಿ ಬಹಿರಂಗವಾದ ಕೆಲವೇ ದಿನಗಳಲ್ಲಿ ಇದೀಗ ಪ್ರಕರಣದಲ್ಲಿ ಮತ್ತೆ ನಿರೂಪಕಿ ಅನುಶ್ರೀ ಹೆಸರು ಸಂಚಲನ ಮೂಡಿಸಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಇದೇ ಹೊತ್ತಿಗೆ ಮಂಗಳೂರು ಪೊಲೀಸರ ವಿಚಾರಣೆ ಎದುರಿಸಿದ್ದ ನಿರೂಪಕಿ ಅನುಶ್ರೀ ಹೆಸರು ಇದೀಗ ಪ್ರಕರಣ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಾಗಿದೆ. ‘’ಅನುಶ್ರೀ ಡ್ರಗ್ಸ್ ಸೇವಿಸುತ್ತಿದ್ದರು’’ ಎಂದು ಡ್ರಗ್ಸ್ ಪ್ರಕರಣದ ಎ-2 ಆರೋಪಿ ಕಿಶೋರ್ ಅಮನ್ ಶೆಟ್ಟಿ ಪೊಲೀಸರ ಮುಂದೆ ಹೇಳಿಕೆ ನೀಡಿರುವುದು ಚಾರ್ಜ್ ಶೀಟ್‌ನಲ್ಲಿದೆ ದಾಖಲಾಗಿದೆ.
ಕಿಶೋರ್ ಹೇಳಿಕೆಯನ್ನು ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆ ಹಿನ್ನೆಲೆಯಲ್ಲಿ ಇದೀಗ ಪ್ರಜರಣದಲ್ಲಿ ಅನುಶ್ರೀ ಪಾತ್ರದ ಕುರಿತ ಮತ್ತೊಂದು ಸುತ್ತಿನ ತನಿಖೆ ನಡೆಸುವಂತೆ ಮತ್ತು ರಾಗಿಣಿ ಮತ್ತು ಸಂಜನಾ ವಿಷಯದಲ್ಲಿ ನಡೆಸಿದಂತೆ ಅನುಶ್ರೀಯನ್ನು ಕೂಡ ಎಫ್ ಎಸ್ ಎಲ್ ಪರೀಕ್ಷೆಗೆ ಒಳಪಡಿಸಬೇಕು. ಆ ಮೂಲಕ ಅನುಶ್ರೀ ಸ್ವತಃ ಡ್ರಗ್ಸ್ ಸೇವಿಸುತ್ತಿದ್ದರು ಮತ್ತು ಸಾಗಣೆ ದಂಧೆಯಲ್ಲಿ ಕೂಡ ಭಾಗಿಯಾಗಿದ್ದರು ಎಂಬ ಕಿಶೋರ್ ಆರೋಪದ ಸತ್ಯಾಸತ್ಯತೆ ಹೊರಬರಬೇಕು ಎಂಬ ಆಗ್ರಹ ಸ್ಯಾಂಡಲ್ ವುಡ್ ನಿಂದಲೇ ಕೇಳಿಬಂದಿದೆ.
ಹಾಗೇ, ರಾಗಿಣಿ ಮತ್ತು ಸಂಜನಾ ವಿಷಯದಲ್ಲಿ ಬೆಂಗಳೂರು ಸಿಸಿಬಿ, ಅವರಿಬ್ಬರ ಹೆಸರು ಕೇಳಿಬರುತ್ತಲೇ ಕರೆಸಿ ವಿಚಾರಣೆ ನಡೆಸಿದ್ದರು. ಅಲ್ಲದೆ ತನಿಖೆಗೆ ಪೂರಕವಾಗಿ ಅವರಿಬ್ಬರ ಪರೀಕ್ಷೆಗೊಳಪಡಿಸಿ, ಅಗತ್ಯ ರಕ್ತ, ಮೂತ್ರ ಮತ್ತು ಹೇರ್ ಫಾಲಿಕಲ್ಸ್ ಮಾದರಿ ಸಂಗ್ರಹಿಸಿ ಎಫ್ ಎಸ್ ಎಲ್ ಗೆ ರವಾನಿಸಲಾಗಿತ್ತು. ಆರೋಪಿಗಳು ಏನೇ ಹೇಳಿದರೂ ಎಫ್ ಎಸ್ ಎಲ್ ವರದಿ ಅಬರಿಬ್ಬರು ಸೇರಿದಂತೆ ಬಂಧಿತರಲ್ಲಿ ಬಹುತೇಕರು ಡ್ರಗ್ಸ್ ಕಳೆದ ಒಂದು ವರ್ಷದ ಅವಧಿಯಲ್ಲಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.
ಆದರೆ, ಇಂತಹದ್ದೇ ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಕಳೆದ ವರ್ಷ ವಿಚಾರಣೆ ಆರಂಭಿಸಿದ್ದ ಅಲ್ಲಿನ ಪೊಲೀಸರು, ಸ್ವತಃ ಪ್ರಕರಣದ ಪ್ರಮುಖ ಆರೋಪಿಗಳೇ ಆ್ಯಂಕರ್ ಅನುಶ್ರೀ ಹೆಸರನ್ನು ವಿಚಾರಣೆ ವೇಳೆ ಪ್ರಸ್ತಾಪಿಸಿ, ಆಕೆಯ ಮೂಲಕವೇ ತಾವು ಮಾದಕ ವಸ್ರು ಪಡೆಯುತ್ತಿದ್ದುದಾಗಿ ಹೇಳಿದ್ದರೂ ಯಾಕೆ ಅನುಶ್ರೀ ಹೇರ್ ಫಾಲಿಕಲ್ಸ್, ರಕ್ತ ಮತ್ತಿತರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಿಲ್ಲ? ಯಾಕೆ ಆಕೆಯನ್ನು ವಶಕ್ಕೆ ಪಡೆದು ಸರಿಯಾದ ವಿಚಾರಣೆ ನಡೆಸಲಿಲ್ಲ? ಎಂಬ ಪ್ರಶ್ನೆಯೂ ಎದ್ದಿದೆ.
ಈ ನಡುವೆ, ಮಂಗಳೂರು ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿಕೆ ನೀಡಿ, ‘’ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಶ್ರೀ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇದೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಹಾಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಅನುಶ್ರೀ ವಿಚಾರಣೆ ನಡೆಯುವ ಸಾಧ್ಯತೆ ಕಡಿಮೆ ಇದೆ’’ ಎಂದಿರುವುದು ವರದಿಯಾಗಿದೆ.
ಆದರೆ, ಅದೇ ಮಂಗಳೂರು ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ, ಮೊದಲನೇ ಆರೋಪಿ ಮತ್ತು ಅನುಶ್ರೀ ಡಾನ್ಸ್ ಕೋಚ್ ಕಿಶೋರ್, ‘’ನಾನು ಸುಮಾರು 2007-08ರ ಸಮಯದಲ್ಲಿ ಬೆಂಗಳೂರಿನ ಒಂದು ಡ್ಯಾನ್ಸ್ ಅಕಾಡೆಮಿಯಲ್ಲಿದ್ದಾಗ ಟಿವಿ ಆಂಕರ್ ಆಗಿರುವ ಅನುಶ್ರೀ ಅವರಿಗೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನನ್ನ ಸ್ನೇಹಿತ ತರುಣ್ ಕೊರಿಯೋಗ್ರಫಿ ಮಾಡುತ್ತಿದ್ದ. ತರುಣ್ ಮೂಲಕವೇ ನನಗೆ ಅನುಶ್ರೀ ಪರಿಚಯವಾಯಿತು. ಡ್ಯಾನ್ಸ್ ರಿಯಾಲಿಟಿ ಶೋ ಫೈನಲ್‌ನಲ್ಲಿ ನನಗೂ ಸಹ ಕೊರಿಯೋಗ್ರಫಿ ಮಾಡುವಂತೆ ತಿಳಿಸಿದ್ದರಿಂದ, ನಾನು ಮತ್ತು ತರುಣ್.. ಇಬ್ಬರೂ ಕೂಡಿ ಅನುಶ್ರೀ ಅವರಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದೇವೆ. ಈ ಪ್ರೋಗ್ರಾಮ್‌ನಲ್ಲಿ ಅನುಶ್ರೀ ವಿನ್ ಆದರು. ತರುಣ್ ಅವರ ಬಾಡಿಗೆ ಮನೆಯಲ್ಲಿ ಅನುಶ್ರೀ ತಡರಾತ್ರಿ ತನಕ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. ಕೆಲವು ದಿನ ನಾನು ಕೂಡ ತರುಣ್ ಜೊತೆ ಹೋಗುತ್ತಿದ್ದೆ. ಆಗ ನಾವು ಮೂರು ಜನ ತರುಣ್ ಮನೆಯಲ್ಲೇ ಅಡುಗೆ ಮಾಡಿ, ಊಟ ಮಾಡುವ ಸಮಯದಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡಿರುತ್ತೇವೆ’’ ಎಂದಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
‘’ಅನುಶ್ರೀ ವಿಜೇತರಾಗಿದ್ದಕ್ಕೆ ನಾನು, ತರುಣ್ ಮತ್ತು ಅನುಶ್ರೀ, ಬೆಂಗಳೂರಿನಲ್ಲಿ ಮಾದಕ ವಸ್ತುಗಳನ್ನು ಸೇವಿಸಿ, ಡ್ರಿಂಕ್ಸ್ ಪಾರ್ಟಿ ಮಾಡಿರುತ್ತೇವೆ. ಮಾದಕ ವಸ್ತು ಸೇವನೆ ಖರೀದಿಯಲ್ಲಿ ಅನುಶ್ರೀ ಭಾಗಿಯಾಗಿರುತ್ತಾರೆ. ನಾವು ಡ್ಯಾನ್ಸ್ ಪ್ರಾಕ್ಟೀಸ್ ಮಾಡುವ ಸಮಯ ಮತ್ತು ಅನುಶ್ರೀ ಅವರಿಗೆ ಕೊರಿಯೋಗ್ರಫಿ ಮಾಡುವ ಸಮಯದಲ್ಲಿ ಹಲವಾರು ಬಾರಿ ಮಾದಕ ವಸ್ತುಗಳನ್ನು ಸೇವಿಸಿರುತ್ತೇವೆ. ಅನುಶ್ರೀ ಅವರು ಪ್ರಾಕ್ಟೀಸ್ ಮಾಡಲು ನಮ್ಮ ರೂಮ್‌ಗೆ ಬರುವಾಗ ಮಾದಕ ವಸ್ತುಗಳನ್ನು ಖರೀದಿಸಿ ತಂದು ನಮಗೆ ನೀಡಿ, ನಮ್ಮ ಜೊತೆ ಸೇವನೆಯನ್ನೂ ಕೂಡ ಮಾಡಿರುತ್ತಾರೆ. ಡ್ರಗ್ಸ್ ಯಾರು ನೀಡುತ್ತಾರೆ ಎಂದು ಅನುಶ್ರೀ ಅವರಿಗೆ ನಮಗಿಂತ ಹೆಚ್ಚು ತಿಳಿದಿದೆ. ಅವರಿಗೆ ಡ್ರಗ್ಸ್ ಪೆಡ್ಲರ್‌ಗಳ ಪರಿಚಯ ಇರುತ್ತದೆ. ಅವರು ಸುಲಭವಾಗಿ ಮಾದಕ ವಸ್ತುಗಳನ್ನು ತರಿಸುತ್ತಾರೆ. ಅವರು ಹೇಗೆ ತರಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ’’ ಎಂದು ಕಿಶೋರ್ ಅಮನ್ ಶೆಟ್ಟಿ ವಿಚಾರಣೆ ವೇಳೆ ಹೇಳಿಕೆ ನೀಡಿ, ಸಹಿ ಹಾಕಿದ್ದಾನೆ. ಆ ಹೇಳಿಕೆಯ ಪ್ರತಿ ಮಾಧ್ಯಮಗಳಿಗೆ ಲಭ್ಯವಾಗಿದೆ.
ಮತ್ತೊಂದು ಬೆಳವಣಿಗೆಯಲ್ಲಿ, ಪೊಲೀಸರ ಮುಂದೆ ತಾವು ಕೊಟ್ಟಿರುವ ಹೇಳಿಕೆ ಬಹಿರಂಗವಾಗುತ್ತಿದ್ದಂತೆಯೇ, ಕಿಶೋರ್ ಅಮನ್ ಶೆಟ್ಟಿ ಉಲ್ಟಾ ಹೊಡೆದಿದ್ದಾನೆ. ಚಾರ್ಜ್ ಶೀಟ್‌ನಲ್ಲಿರುವ ತಮ್ಮ ಹೇಳಿಕೆಯನ್ನು ಕಿಶೋರ್ ನಿರಾಕರಿಸಿದ್ದು, ‘’ಅನುಶ್ರೀ ಬಗ್ಗೆ ನಾನು ಆ ರೀತಿ ಹೇಳಿಕೆ ನೀಡಿಲ್ಲ. ಬೇರೆ ಯಾರು ಆ ರೀತಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅನುಶ್ರೀ ಜೊತೆ ನಾವು ಪಾರ್ಟಿಯಲ್ಲಿ ಶಾಮೀಲು ಆಗಿಲ್ಲ’’ ಎಂದಿದ್ದಾನೆ.
ಈ ನಡುವೆ, ಪ್ರಕರಣದಲ್ಲಿ ಆರಂಭದಿಂದಲೂ ಪೊಲೀಸರಿಗೆ ಹಲವು ಮಾಹಿತಿ ನೀಡಿರುವ ನಿರ್ಮಾಪಕ ಮತ್ತು ನಿರ್ದೇಶಕರಾದ ಇಂದ್ರಜಿತ್ ಲಂಕೇಶ್ ಮತ್ತು ಪ್ರಶಾಂತ್ ಸಂಬರಗಿ ಅವರು, ಬೆಂಗಳೂರು ಮತ್ತು ಮಂಗಳೂರು ಪೊಲೀಸರ ತನಿಖಾ ವೈಖರಿ ಹೋಲಿಸಿ, ಮಂಗಳೂರು ಪೊಲೀಸರು ಅನುಶ್ರೀ ವಿಷಯದಲ್ಲಿ ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಪಾಲಿಸಬೇಕಾದ ಕನಿಷ್ಟ ತನಿಖಾ ಮುನ್ನೆಚ್ಚರಿಕೆಯನ್ನೂ ಪಾಲಿಸದೆ ಮೈಮರೆತ ಬಗ್ಗೆ ಪ್ರಶ್ನಿಸಿದ್ದಾರೆ. ಜೊತೆಗೆ ಅನುಶ್ರೀಗೆ ಪ್ರಭಾವಿ ರಾಜಕಾರಣಿಯೊಬ್ಬರು ರಕ್ಷಣೆ ನೀಡುತ್ತಿದ್ದಾರೆ. ಆ ‘ಶುಗರ್ ಡ್ಯಾಡಿ’ ಪ್ರಭಾವದ ಬಲದಿಂದಲೇ ಆಕೆ ಪೊಲೀಸರ ಮೇಲೆ ಪ್ರಭಾವ ಬೀರಿ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾರೆ ಎಂದೂ ಗಂಭೀರ ಆರೋಪ ಮಾಡಿದ್ದಾರೆ.
ಈ ನಡುವೆ ಪ್ರಕರಣದ ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಯಾವ ಮುಲಾಜಿಲ್ಲದೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು. ಯಾವುದೇ ಪ್ರಭಾವಕ್ಕೆ ಜಗ್ಗುವ, ಬಗ್ಗುವ ಮಾತೇ ಇಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆ ಇದೀಗ ಮಂಗಳೂರು ಪೊಲೀಸರ ಆರೋಪಪಟ್ಟಿಯಲ್ಲಿ ಆಂಕರ್ ಅನುಶ್ರೀ ಹೆಸರು ಇರುವುದು ಬಹಿರಂಗವಾಗುತ್ತಲೇ ಡ್ರಗ್ಸ್ ಹಗರಣ ಮತ್ತೊಮ್ಮೆ ಭಾರಿ ಚರ್ಚೆಯ ವಸ್ತುವಾಗಿದೆ. ಅನುಶ್ರೀ ವಿಚಾರಣೆ ವಿಷಯದಲ್ಲಿ ಮಂಗಳೂರು ಪೊಲೀಸರು ಪ್ರಭಾವಿ ನಾಯಕ ‘ಶುಗರ್ ಡ್ಯಾಡಿ’ ಒತ್ತಡಕ್ಕೆ ಮಣಿದಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಸಚ್ಛಾರಿತ್ರ್ಯ, ಶೀಲ, ಸಂಸ್ಕೃತಿಯ ಜಪ ಮಾಡುವ ಆರ್ ಎಸ್ ಎಸ್ ನ ಅಚ್ಚುಮೆಚ್ಚಿನ ಗೃಹ ಸಚಿವರು ಇಂಥ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ನೀಡುವಂತೆ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕಿದೆ. ಆ ಮೂಲಕ ತಾವು ನುಡಿದಂತೆ ನಡೆಯುವವರು ಮತ್ತು ದೇಶದ ಯುವ ಜನತೆಯ ನೈಜ ಸ್ವಾಸ್ಥ್ಯದ ಬದ್ಧತೆ ಉಳ್ಳವರು ಎಂಬುದನ್ನು ಸಾಬೀತು ಮಾಡಬೇಕಿದೆ.