
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಿನ್ನೆ ರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಡಾ. ಜಿ. ಪರಮೇಶ್ವರ್, ಕೆ.ಜೆ.ಜಾರ್ಜ್, ಹೆಚ್.ಕೆ.ಪಾಟೀಲ್ ಸೇರಿದಂತೆ ಸಚಿವ ಸಂಪುಟದ ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದರು. ರಾಜ್ಯಪಾಲರ ಭಾಷಣ, ಕೆಪಿಎಸ್‌ಸಿ ಗೊಂದಲ ಕುರಿತಂತೆ ವಿಧಾನಸಭೆಯಲ್ಲಿ ಸಿಎಂ ಉತ್ತರ ಕೊಡಲಿದ್ದು, ವಿಪಕ್ಷಗಳು ಅಡ್ಡಿಪಡಿಸಿದ್ರೆ ತಿರುಗೇಟು ಕೊಡುವ ಬಗ್ಗೆ ಚರ್ಚೆ ಮಾಡಲಾಯ್ತು.

ಬಜೆಟ್‌ನಲ್ಲಿ ಅನುದಾನ ನೀಡದ ಬಗ್ಗೆ ಶಾಸಕರು ಅಸಮಾಧಾನ ಹೊರಹಾಕಿದ್ದು, ಎಲ್ಲಾ ಶಾಸಕರಿಗೂ ಅನುದಾನ ಕೊಡುತ್ತೇನೆ. ಏಪ್ರಿಲ್, ಮೇ ತಿಂಗಳಲ್ಲಿ ಅನುದಾನ ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇನ್ನೂ ಶಾಸಕಾಂಗ ಪಕ್ಷದ ಸಭೆ ಬಳಿಕ ಇಬ್ಬರು ಸಚಿವರ ನಡುವೆ ಜಟಾಪಟಿ ನಡೆದಿದೆ. ಸಚಿವ ಶರಣಪ್ರಕಾಶ್ ಪಾಟೀಲ್ ಹಾಗೂ ಸಚಿವ ಬೋಸರಾಜು ನಡುವೆ ಮಾತಿನ ವಾಗ್ವಾದ ನಡೆದಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ ಗಲಾಟೆ.

ರಾಯಚೂರು ವರ್ಗಾವಣೆ ವಿಚಾರಕ್ಕೆ ಸಚಿವ ಬೋಸರಾಜು ಆಕ್ಷೇಪ ವ್ಯಕ್ತಪಡಿಸಿದ್ದು, ರಾಯಚೂರು ರಾಜಕೀಯದಲ್ಲಿ ಹಿಡಿತ ಸಾಧಿಸುವ ವಿಚಾರವಾಗಿ ಸಚಿವ ಬೋಸರಾಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ರಾಯಚೂರು ಜಿಲ್ಲೆಯವನು, ವರ್ಗಾವಣೆ ವಿಚಾರಕ್ಕೆ ನೀನು ಯಾಕೆ ಶಿಫಾರಸು ಪತ್ರ ನೀಡುತ್ತಿದ್ಯಾ ಎಂದು ಬೋಸರಾಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ನಾನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು, ಶಾಸಕರು ಕೇಳಿದ್ದಾರೆ ಅದಕ್ಕೆ ಪತ್ರ ನೀಡಿದ್ದೇನೆ ಎಂದಿದ್ದಾರೆ ಸಚಿವ ಶರಣಪ್ರಕಾಶ್ ಪಾಟೀಲ್. ಶಾಸಕರ ಬೇಡಿಕೆಗಳಿಗೆ ಸ್ಪಂದಿಸೋದು ನನ್ನ ಕೆಲಸ ಎಂದು ತಿರುಗೇಟು ನೀಡಿದ್ದಾರೆ ಎನ್ನಲಾಗ್ತಿದೆ.

ಶಾಸಕ ಬಸನಗೌಡ ದದ್ದಲ್ಗೆ ಲೆಟರ್ ಕೊಟ್ಟಿದ್ದಕ್ಕೆ ಬೋಸರಾಜು ಗರಂ ಆಗಿದ್ದಾರೆ. ನನ್ನನ್ನು ಕೇಳದೆ ಹೇಗೆ ಪತ್ರ ಕೊಟ್ರಿ ಅಂತ ಸಿಟ್ಟು ಪ್ರದರ್ಶನ ಮಾಡಿದ್ದಾರೆ ಬೋಸರಾಜು. ಈ ವೇಳೆ ಮಾತಿಗೆ ಮಾತು ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಹೋದಾಗ ಹಿರಿಯ ನಾಯಕರು ಮಧ್ಯಪ್ರವೇಶ ಮಾಡಿ, ಇಬ್ಬರನ್ನೂ ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ. ಒಟ್ಟಾರೆ ವಿರೋಧ ಪಕ್ಷಗಳ ವಿರುದ್ಧ ಸದನದಲ್ಲಿ ಹೇಗೆಲ್ಲಾ ಮಾತನಾಡಬೇಕು ಎಂದು ಯೋಜನೆ ರೂಪಿಸಲು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರು ಮಾತಿನ ಯುದ್ಧ ಮಾಡಿದ್ರೆ, ಶಾಸಕರು ಅನುದಾನಕ್ಕಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬೇಸರ ಹೊರ ಹಾಕಿ ಆಕ್ರೋಶ ವ್ಯಕ್ತಪಡಿಸುವ ವೇದಿಕೆ ಆಗಿದೆ ಅನ್ನೋ ಚರ್ಚೆ ಕಾಂಗ್ರೆಸ್ನಲ್ಲೇ ನಡೀತಿದೆ.







