ಬೆಂಗಳೂರು: ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್(Kanakapura Srinivas) ಅವರು ತಮ್ಮ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ ಪ್ರೇಮ್(Director Prem) ಫಿಲಂ ಚೇಂಬರ್‌ಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಇತ್ತೀಚೆಗೆ ನಡೆದ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕನಕಪುರ ಶ್ರೀನಿವಾಸ್, ನಿರ್ದೇಶಕ ಪ್ರೇಮ್ ಸೇರಿದಂತೆ ಕೆಲವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಪ್ರೇಮ್ ಹಣ ಪಡೆದು ಸಿನಿಮಾ ಮಾಡಿಕೊಡದೇ ವಂಚಿಸಿದ್ದಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ನಿರ್ದೇಶಕ ಪ್ರೇಮ್ ಇದೀಗ ಅಧಿಕೃತವಾಗಿ ದೂರು ನೀಡಿದ್ದಾರೆ.́

ಖುದ್ದಾಗಿ ಫಿಲಂ ಚೇಂಬರ್‌ಗೆ ಆಗಮಿಸಿದ ಪ್ರೇಮ್, ನೂತನ ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿ ಮಾಡಿ ಕನಕಪುರ ಶ್ರೀನಿವಾಸ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ.

ದೂರಿನಲ್ಲಿ ಪ್ರೇಮ್ ಅವರು, ʼನಾನು ಕಳೆದ 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ನಟ ಹಾಗೂ ನಿರ್ಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ನನ್ನ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ್ದೇನೆ. 2004ರಲ್ಲಿ ನಿರ್ಮಾಪಕ ಆರ್.ಎಸ್. ಶ್ರೀನಿವಾಸ್ ಅವರು ನನ್ನನ್ನು ಸಂಪರ್ಕಿಸಿ ಸಿನಿಮಾ ನಿರ್ದೇಶನ ಮಾಡಲು ಕೇಳಿಕೊಂಡು, ಮುಂಗಡವಾಗಿ 9 ಲಕ್ಷ ರೂ. ನೀಡಿದ್ದರು. ನಂತರ ಅವರಿಗಾಗಿ ಆಫೀಸ್ ತೆರೆಯಲಾಗಿದ್ದು, ತಂಡ ಕಟ್ಟಿಕೊಂಡು ಕಥೆ ಹಾಗೂ ಚಿತ್ರಕಥೆ ಮಾಡಲಾಯಿತು. ಆದರೆ ನಂತರ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಒಂದು ವರ್ಷ ಕಾಲ ನನ್ನ ಹಾಗೂ ನನ್ನ ತಂಡದ ಸಮಯವನ್ನು ವ್ಯರ್ಥ ಮಾಡಿದರುʼ.

ʼಹಲವು ಬಾರಿ ಸಂಪರ್ಕಿಸಿದಾಗ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದೇ ಇದ್ದಾಗ ಒಂದು ವರ್ಷಗಳ ಕಾಲ ನನ್ನ ಹಾಗೂ ನನ್ನ ತಂಡದ ಸಮಯವನ್ನು ವ್ಯರ್ಥ ಮಾಡಿದ್ದಲ್ಲದೆ ಯಾವುದೇ ರೀತಿಯ ಹಣ ಕಾಸನ್ನು ನನ್ನ ಆಫೀಸ್‌ನ ವೆಚ್ಚಕ್ಕಾಗಲಿ, ನನ್ನ ಸಹ ನಿರ್ದೇಶಕರಿಗೆ ಹಾಗೂ ತಂಡಕ್ಕಾಗಲಿ ನೀಡಲಿಲ್ಲ. ಒಂದು ವರ್ಷಗಳ ಕಾಲ ಆಫೀಸ್‌ನ ಹಾಗೂ ತಂಡದ ಖರ್ಚು-ವೆಚ್ಚಗಳನ್ನು ನಾನೇ ಬರಿಸಿರುತ್ತೇನೆ, ಇದರಿಂದ ನನಗೆ ವೈಯಕ್ತಿಕವಾಗಿ 15 ರಿಂದ 20 ಲಕ್ಷ ಖರ್ಚು ಮಾಡಿದ್ದೇನೆ ಹಾಗೂ ನನಗೆ ಈ ಸಮಯದಲ್ಲಿ ಹಲವಾರು ನಿರ್ಮಾಪಕರು ನನಗೆ ನಿರ್ದೇಶಿಸಲು ಹಾಗೂ ನನಗೆ ಅವಕಾಶಗಳು ಬಂದಿದ್ದವು ನಾನು ಇವರ ಚಿತ್ರ ನಿರ್ದೇಶನ ಮಾಡಲು ಬಂದಂತಹ ಈ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದಲ್ಲದೆ ಕೋಟಿಗಟ್ಟಲೆ ನಷ್ಟವನ್ನು ಅನುಭವಿಸಿದ್ದೇನೆʼ ಎಂದರು.

ಅದೇ ಅವಧಿಯಲ್ಲಿ ಆಫೀಸ್ ಹಾಗೂ ತಂಡದ ಖರ್ಚುಗಳನ್ನು ತಾವೇ ಭರಿಸಿದ್ದು, ಸುಮಾರು 15 ರಿಂದ 20 ಲಕ್ಷ ರೂ. ವೈಯಕ್ತಿಕ ನಷ್ಟವಾಗಿದೆ ಎಂದು ಪ್ರೇಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕಾರಣದಿಂದ ಬೇರೆ ಸಿನಿಮಾಗಳ ಅವಕಾಶಗಳನ್ನು ಕೂಡ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಕನಕಪುರ ಶ್ರೀನಿವಾಸ್ ಅವರು ಸಾರ್ವಜನಿಕವಾಗಿ ಆರೋಪ ಮಾಡಿದ ಹಿನ್ನೆಲೆ ಇದೀಗ ಈ ವಿಷಯ ಫಿಲಂ ಚೇಂಬರ್ ಮಟ್ಟಕ್ಕೆ ತಲುಪಿದ್ದು, ಮುಂದಿನ ಕ್ರಮದ ಬಗ್ಗೆ ಕುತೂಹಲ ಮೂಡಿಸಿದೆ.






