
ರಾಜ್ಯದಲ್ಲಿ ಡೆಂಘೀ ರೋಗ ಹೆಚ್ಚಳವಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಸ್ವತಃ ಫೀಲ್ಡಿಗಿಳಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಘೀ ಬಗ್ಗೆ ಜಾಗೃತಿ ಮೂಡಿಸಿದರು.ಈಡಿಸ್ ಲಾರ್ವಾ ನಾಶಪಡಿಸುವ ದಿನದಂದು ಸ್ವತಃ ಫೀಲ್ಡಿಗಿಳಿದ ಆರೋಗ್ಯ ಸಚಿವ, ಬೆಂಗಳೂರಿನ ವಾರ್ಡ್‌ಗಳಲ್ಲಿ ಲಾರ್ವಾ ನಾಶಪಡಿಸುವ ಔಷಧಿ ಸಿಂಪಡಿಸಿದರು.

ಬೆಂಗಳೂರಿನ ರಾಮಸ್ವಾಮಿ ಪಾಳ್ಯದಲ್ಲಿ ಫೀವರ್ ಕ್ಲಿನಿಕ್‌ಗೆ ಚಾಲನೆ ನೀಡಿದ ಬಳಿಕ, ಕಾಲೋನಿಗಳಲ್ಲಿ ಪರಿಶೀಲನೆ ನಡೆಸಿದ ಸಚಿವರು, ನೀರು ಶೇಖರಣೆ ಮಾಡದಂತೆ ನಿವಾಸಿಗಳಿಗೆ ತಿಳುವಳಿಕೆ ಮೂಡಿಸಿದರು.ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಸಚಿವ ಗುಂಡೂರಾವ್, “ಡೆಂಘೀ ರೋಗ ಬಾರದಂತೆ ಜಾಗರೂಕತೆ ವಹಿಸಬೇಕು. ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರ ವಹಿಸಿದರೆ ಮಾತ್ರ ಡೆಂಘೀ ನಿಯಂತ್ರಣ ಮಾಡಬಹುದು” ಎಂದು ತಿಳಿಸಿದರು.

ಆ ಬಳಿಕ ವಸಂತ ನಗರದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಅವರು, ಮಕ್ಕಳಲ್ಲಿ ಡೆಂಘೀ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಡೆಂಘೀ ಹರಡುವ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದರು.ಈಡಿಸ್ ಸೊಳ್ಳೆ ಉತ್ಪತ್ತಿಯಾಗುವ ತಾಣಗಳ ಬಗ್ಗೆ ವಿದ್ಯಾರ್ಥಿಗಳಿಗಳೊಂದಿಗೆ ಸಂಭಾಷಣೆ ನಡೆಸಿದ ಸಚಿವರು, ನೀರು ಹೆಚ್ಚು ದಿನ ಸಂಗ್ರಹವಾಗದಂತೆ, ನಿಮ್ಮ ನಿಮ್ಮ ಮನೆಗಳಲ್ಲಿ ನೀವೇ ಎಚ್ಚರಿಕೆ ವಹಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ರಕ್ಷಣಾ ಕ್ರೀಮ್‌ಗಳ ವಿತರಣೆ ಮಾಡಿದರು.ಆ ಬಳಿಕ ವಸಂತನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆರೋಗ್ಯ ಸಚಿವರಿಗೆ ಶಿವಾಜಿನಗರ ವಿಧಾನಸಭಾ ಕೇತ್ರದ ಶಾಸಕ ರಿಝ್ವಾನ್ ಹರ್ಷದ್ ಸಾಥ್ ನೀಡಿದರು.