ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್ ಗೆ ಮರಳಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಹಾದಿ ಕಂಡುಕೊಳ್ಳಲು ಮತ್ತೆ ವಿಫಲವಾಗಿದೆ.
ಮುಂಬೈನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ತಂಡ 6 ವಿಕೆಟ್ ಗಳಿಂದ ರೋಚಕ ಗೆಲುವು ದಾಖಲಿಸಿದರೆ, ಆರ್ ಸಿಬಿ ತಂಡ ಹ್ಯಾಟ್ರಿಕ್ ಸೋಲುಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ಗೆ 170 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಗುಜರಾತ್ ಟೈಟಾನ್ಸ್ 3 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಗುಜರಾತ್ ತಂಡ ಒಂದು ಹಂತದಲ್ಲಿ 95 ರನ್ ಗೆ 4 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ಜೊತೆಯಾದ ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತವಾಟಿಯಾ ಮುರಿಯದ 5ನೇ ವಿಕೆಟ್ ಗೆ 81 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಡೇವಿಡ್ ಮಿಲ್ಲರ್ 24 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 39 ರನ್ ಗಳಿಸಿದರು. ರಾಹುಲ್ ತವಾಟಿಯಾ 25 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 43 ರನ್ ಸಿಡಿಸಿ ಅಜೇಯರಾಗಿ ಉಳಿದರು.
ಆರ್ ಸಿಬಿ ಪರ ಶಹಬಾಜ್ ಅಹ್ಮದ್ ಮತ್ತು ಹಸರಂಗ ತಲಾ ೨ ವಿಕೆಟ್ ಪಡೆದರೆ ಉಳಿದವರು ವಿಫರಾದರು.






