ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ(Mysuru) ನಿನ್ನೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡು(Cylinder blast) ಓರ್ವ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಮೈಸೂರಿನ ಅಂಬಾವಿಲಾಸ ಅರಮನೆ(Mysuru Palace) ಆವರಣದಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಅರಮನೆಯ ಜಯಮಾರ್ತಾಂಡ ದ್ವಾರದ ಊಟಿ ರಸ್ತೆಯ ಬದಿಯಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಯ ಸಿಲಿಂಡರ್ ಸ್ಫೋಟಗೊಂಡಿದ್ದು, ಬಲೂನ್ ವ್ಯಾಪಾರಿ ಸಲೀಂ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಒಟ್ಟು ನಾಲ್ಕು ಮಂದಿ ಗಾಯಗೊಂಡಿದ್ದು, ಈ ಪೈಕಿ ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಗಾಯಾಳುಗಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಉತ್ತರ ಪ್ರದೇಶ ಮೂಲದ ಸಲೀಂ ಬಲೂನ್ ಮಾರುವ ವೃತ್ತಿ ಮಾಡುತ್ತಿದ್ದು, ಕಳೆದ ವಾರವಷ್ಟೇ ಮೈಸೂರಿಗೆ ವ್ಯಾಪಾರಕ್ಕೆ ಬಂದಿದ್ದ. ಸೈಕಲ್‌ನಲ್ಲಿ ಹೀಲಿಯಂ ಗ್ಯಾಸ್ ಇಟ್ಟುಕೊಂಡು ಬಲೂನ್‌ಗೆ ತುಂಬಿಸಿ ಮಾರಾಟ ಮಾಡುತ್ತಿದ್ದ ಸಲೀಂ ನಿನ್ನೆ ರಾತ್ರಿ 8.30ರ ಸುಮಾರಿಗೆ ವರಾಹ ಗೇಟ್ ಬಳಿ ಬಲೂನ್ ಮಾರಾಟ ಮಾಡುತ್ತಾ ಜಯಮಾರ್ತಾಂಡ ಗೇಟ್ ಬಳಿ ಬಂದಿದ್ದಾನೆ.

ಈ ವೇಳೆ ಕೆಲ ಸಾರ್ವಜನಿಕರು ಬಲೂನ್ ತೆಗೆದುಕೊಳ್ಳಲು ಬಂದಿದ್ದಾರೆ. ಸಲೀಂ ಸುಮಾರು ಐದಾರು ಜನರಿಗೆ ಬಲೂನ್ ಮಾರಾಟ ಮಾಡಿದ್ದು, ಇನ್ನೂ ಕೆಲವರಿಗೆ ಬಲೂನ್ ನೀಡುತ್ತಿದ್ದ ಈ ವೇಳೆ ಹೀಲಿಯಂ ಗ್ಯಾಸ್ ತುಂಬಿದ್ದ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.












